ಅತಿಥಿ ಶಿಕ್ಷಕರ ಸೇವಾವಧಿ ವಿಸ್ತರಿಸಲು ಸಿಎಂಗೆ ಹೊರಟ್ಟಿ ಪತ್ರ
ಬೆಂಗಳೂರು, – ಕೊರೊನಾ ಸೋಂಕು ತಡೆಗೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದರಿಂದಾಗಿ ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸೇವಾ ಅವಧಿಯನ್ನು ಜನವರಿಯಿಂದ ಆಗಸ್ಟ್ ತಿಂಗಳ ತನಕ ಮುಂದುವರೆಸಿ ಅವರಿಗೆ ಗೌರವ ಧನ ನೀಡಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಈ ಹಿಂದೆ 9 ರಿಂದ 10 ತಿಂಗಳು ಸೇವಾ ಅವಧಿಯನ್ನು ಪರಿಗಣಿಸಿ ಗೌರವಧನ ನೀಡುತ್ತಿದ್ದರು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ತೆಗೆದುಕೊಂಡು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತೆ ಮೇ ತಿಂಗಳಲ್ಲಿ ತೆಗೆದುಕೊಂಡು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಇದರಿಂದಾಗಿ ಅತಿಥಿ ಉಪನ್ಯಾಸಕರಿಗೆ ಕೇವಲ ನಾಲ್ಕು ತಿಂಗಳು ಮಾತ್ರ ಸೇವೆ ಲಭಿಸುತ್ತಿದೆ ಎಂಬ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಸರ್ಕಾರದ ಈ ಕ್ರಮ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಆಗಸ್ಟ್‌ನಿಂದ ಜನವರಿ ತಿಂಗಳವರೆಗೆ ಮುಂದುವರೆಸಿದರೆ ಅತಿಥಿ ಉಪನ್ಯಾಸಕರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.