ಸರಳ ಮೆನುವಿನ ಹೊಸ ಇನ್‌ಕಂ ಟ್ಯಾಕ್ಸ್‌ ಇ-ಫೈಲಿಂಗ್‌ ಪೋರ್ಟಲ್‌ಗೆ ಚಾಲನೆ, ಏನಿದರ ವಿಶೇಷತೆ?

ಹೈಲೈಟ್ಸ್‌:

  • ಹೊಸ ಇ-ಫೈಲಿಂಗ್‌ ಪೋರ್ಟಲ್‌ಗೆ ಆದಾಯ ತೆರಿಗೆ ಇಲಾಖೆಯಿಂದ ಚಾಲನೆ
  • ಸರಳ ಮೆನುವಿನ ಹೊಸ ಇ-ಫೈಲಿಂಗ್‌ ಪೋರ್ಟಲ್‌
  • ಇನ್ಫೋಸಿಸ್‌ನಿಂದ ಅಭಿವೃದ್ಧಿ, ಮೊದಲ ದಿನವೇ ಹಲವು ತೊಂದರೆಗಳು ಪತ್ತೆ
  • ಸಮಸ್ಯೆಗಳನ್ನು ಪರಿಹರಿಸಲು ಇನ್ಫೋಸಿಸ್‌ಗೆ ಹಣಕಾಸು ಸಚಿವರ ಸೂಚನೆ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ತನ್ನ ನೂತನ ಇ-ಫೈಲಿಂಗ್‌ ವೆಬ್‌ ಪೋರ್ಟಲ್‌ (ಇ-ಫೈಲಿಂಗ್‌ 2.0)ಅನ್ನು ಅನಾವರಣಗೊಳಿಸಿದೆ.

ಹೊಸ ಪೋರ್ಟಲ್‌ https://www.incometaxindiaefiling.gov.in/home ಆಗಿದ್ದು, ಹಳೆಯ http://incometaxindiaefiling.gov.in ಅನ್ನು ಬದಲಿಸಿದೆ.

ಹೊಸ ಪೋರ್ಟಲ್‌ ಅತ್ಯಾಧುನಿಕ ಹಾಗೂ ತೆರಿಗೆದಾರರಿಗೆ ಸ್ನೇಹಿಯಾಗಿದೆ. ಐಟಿಆರ್‌ ಸಲ್ಲಿಕೆ ತ್ವರಿತವಾಗಲಿದೆ. ರಿಫಂಡ್‌ ಕೂಡ ಬೇಗನೆ ಆಗಲು ಸಹಕಾರಿ ಎಂದು ಇಲಾಖೆ ತಿಳಿಸಿದೆ.

ಇಲಾಖೆಯು ತೆರಿಗೆದಾರಿಗೆ ತಮ್ಮ ಡಿಎಸ್‌ಸಿ (ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌) ಅನ್ನು ಮರು ನೋಂದಣಿ ಮಾಡಿಕೊಳ್ಳಲು ಹಾಗೂ ವೈಯಕ್ತಿಕ ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿಯನ್ನು ‘ಪ್ರೈಮರಿ ಕಾಂಟ್ಯಾಕ್ಟ್’ ಅಡಿಯಲ್ಲಿ ಪರಿಷ್ಕೃತಗೊಳಿಸುವಂತೆ ಸೂಚಿಸಿದೆ.

ವೆಬ್‌ ಪೋರ್ಟಲ್‌, ತೆರಿಗೆದಾರರ ವೈಯಕ್ತಿಕ, ಕಂಪನಿ, ನಾನ್‌-ಕಂಪನಿ ಮತ್ತು ತೆರಿಗೆ ವೃತ್ತಿಪರರು ಎಂಬ ವಿಭಾಗವನ್ನು ಹೊಂದಿದೆ. ಐಟಿಆರ್‌ ಫೈಲಿಂಗ್‌, ರಿಫಂಡ್‌ ಸ್ಟೇಟಸ್‌ ಮತ್ತು ಟ್ಯಾಕ್ಸ್‌ ಸ್ಲಾಬ್‌ಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಸರಳಗೊಳಿಸಲಾಗಿದೆ. ಇಲಾಖೆಯು ಐಟಿಆರ್‌-1, ಐಟಿಆರ್‌-2 ಮತ್ತು 4ಕ್ಕೆ ಉಚಿತ ಐಟಿಆರ್‌ ಸಿದ್ಧತಾ ಸಾಫ್ಟ್‌ವೇರ್‌ ಅನ್ನೂ ನೀಡಲಿದೆ. 2020-21ರಲ್ಲಿ ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ 8.46 ಕೋಟಿ ಮಂದಿ ಬಳಕೆದಾರರು ನೋಂದಣಿಯಾಗಿದ್ದಾರೆ. 3.13 ಕೋಟಿ ಮಂದಿಯ ಐಟಿಆರ್‌ಗಳನ್ನು ಇ-ವೆರಿಫೈ ಮಾಡಲಾಗಿದೆ.

ಹೊಸ ಪೋರ್ಟಲ್‌ನಲ್ಲಿ ಬಳಕೆದಾರರಿಗೆ ಪ್ರಶ್ನೋತ್ತರ (ಎಫ್‌ಎಕ್ಯೂ) ಮತ್ತು ವಿಡಿಯೊಗಳ ಮೂಲಕ ಪೋರ್ಟಲ್‌ ಬಳಕೆ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಚಾಟ್‌ಬೋರ್ಡ್‌ ಮತ್ತು ಸಹಾಯವಾಣಿಯನ್ನು ಕೂಡ ಒದಗಿಸಲಾಗಿದೆ. ಬಳಕೆದಾರರು ತಮ್ಮ ಅಹವಾಲುಗಳನ್ನು ಕೂಡ ಸಲ್ಲಿಸಬಹುದು. ಮೈ ಪ್ರೊಫೈಲ್‌ ಮೆನುವಿನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ತೆರಿಗೆದಾರರು ಪರಿಷ್ಕರಿಸಬಹುದು. ಮೊಬೈಲ್‌ ಆ್ಯಪ್‌ ಸೇವೆಯನ್ನೂ ವ್ಯವಸ್ಥೆಗೊಳಿಸಲಾಗಿದೆ.

ಸಮಸ್ಯೆ ಬಗೆಹರಿಸಲು ಇನ್ಫಿಗೆ ಸೂಚನೆ

ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ ಪೋರ್ಟಲ್‌ನಲ್ಲಿ ಕಂಡು ಬಂದಿರುವ ಅಡಚಣೆಗಳನ್ನು ಪರಿಹರಿಸುವಂತೆ, ಗುಣಮಟ್ಟವನ್ನು ಉಳಿಸುವಂತೆ ಇನ್ಫೋಸಿಸ್‌ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದ್ದಾರೆ. ಸೇವೆಯ ಗುಣಮಟ್ಟವನ್ನು ಸುಧಾರಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಚಿವರು ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಅವರಿಗೆ ಟ್ವೀಟ್‌ ಮಾಡಿದ್ದಾರೆ. ಹೊಸ ವೆಬ್‌ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿರುವ ಬಗ್ಗೆ ತೆರಿಗೆದಾರರು ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *