ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ: ದಿಲ್ಲಿಯಿಂದ ಬಂತು ಸ್ಪಷ್ಟ ಸಂದೇಶ

ಹೈಲೈಟ್ಸ್‌:

  • ಕೊನೆಗೂ ನಾಯಕತ್ವದ ಬದಲಾವಣೆಗೆ ಬಿತ್ತು ಬಿಗ್‌ ಬ್ರೇಕ್‌
  • ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ
  • ಸ್ಪಷ್ಟನೆ ನೀಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾಣೆಯ ಪ್ರಶ್ನೆಯೇ ಇಲ್ಲವೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟ ಪಡಿಸುವುದರೊಂದಿಗೆ ಈ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಸದ್ಯಕ್ಕೆ ಇತ್ಯರ್ಥಗೊಂಡಂತಾಗಿದೆ. ಆದರೆ, ಅಹವಾಲು ತೋಡಿಕೊಳ್ಳಲು ಶಾಸಕರ ವಲಯದಲ್ಲಿ ಒತ್ತಡ ಇರುವುದರಿಂದ ಈ ಸಂಬಂಧ ಮಾತುಕತೆ ನಡೆಸಲು ಅರುಣ್‌ ಸಿಂಗ್‌ ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.

ಅರುಣ್‌ ಸಿಂಗ್‌ ಜೂನ್‌ 15 ಅಥವಾ 16ರಂದು ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಶಾಸಕರ ದೂರು, ದುಮ್ಮಾನ ಆಲಿಸಲಿದ್ದಾರೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸರಕಾರಕ್ಕೆ ಪೂರ್ಣ ಬೆಂಬಲ ನೀಡುವಂತೆ ಸೂಚಿಸಲಿದ್ದಾರೆ. ನಾಯಕತ್ವದ ವಿಷಯದಲ್ಲಿ ಪದೇ ಪದೆ ವಿವಾದ ಉಂಟು ಮಾಡದಂತೆಯೂ ಕಟ್ಟಪ್ಪಣೆ ಮಾಡಲಿದ್ದಾರೆ. ಹಾಗಾಗಿ ಅರುಣ್‌ ಸಿಂಗ್‌ ಅವರ ರಾಜ್ಯ ಭೇಟಿ ಬಿಜೆಪಿಗೆ ಮಹತ್ವದ್ದಾಗಲಿದೆ.

ಬಿಎಸ್‌ವೈ ಮುಂದುವರಿಕೆ

ಸುದ್ದಿಗಾರರೊಂದಿಗೆ ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ಅರುಣ್‌ ಸಿಂಗ್‌ ”ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಆಗಿ ಮುಂದುವರಿಯಲಿದ್ದಾರೆ. ಕೋವಿಡ್‌ ನಿರ್ವಹಣೆಗೆ ಸಿಎಂ ಮತ್ತು ಅವರ ಸಂಪುಟದ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ಯಡಿಯೂರಪ್ಪನವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ಹೈಕಮಾಂಡ್‌ನಲ್ಲಿ ಪಕ್ಷದ ರಾಜ್ಯ ಘಟಕಗಳು ವಿಶ್ವಾಸವಿರಿಸಿವೆ. ರಾಜ್ಯ ಘಟಕಗಳು ಹೈಕಮಾಂಡ್‌ನಿಂದ ಮಾರ್ಗದರ್ಶನ ಪಡೆಯುತ್ತವೆ. ಇದು ನಮ್ಮ ಪಕ್ಷದ ವ್ಯವಸ್ಥೆ. ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯೇ ಆಗಿಲ್ಲ,” ಎಂದು ಅರುಣ್‌ ಸಿಂಗ್‌ ಹೇಳಿದರು.

ಶಾಸಕರೊಂದಿಗೆ ಮಾತನಾಡುವೆ

ಶಾಸಕರ ವಲಯದಲ್ಲಿ ಸಹಿ ಸಂಗ್ರಹದ ವಿದ್ಯಮಾನ ನಡೆದ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್‌ ಸಿಂಗ್‌ ”ಯಾವುದೇ ಶಾಸಕರಿಗೆ ಅಹವಾಲು ಹೇಳಿಕೊಳ್ಳುವುದಿದ್ದರೆ ಅದನ್ನು ನನ್ನ ಮುಂದೆ ಹೇಳಬಹುದು. ಅದನ್ನು ಕೇಳಲು ನಾನು ತೆರಳುತ್ತಿದ್ದೇನೆ. ಶಾಸಕರು ಏನೇ ವಿಚಾರವಿದ್ದರೂ ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳಬಹುದು. ಜತೆಗೆ ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಹೇಳಿಕೊಳ್ಳಬಹುದು,” ಎಂದರು.

ಹೇಳಿಕೆ ಸಮರ ಬೇಡ

ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅರುಣ್‌ ಸಿಂಗ್‌ ”ಈ ರೀತಿಯ ಹೇಳಿಕೆಗಳನ್ನು ಯಾರೂ ನೀಡಬಾರದು. ಇದು ಸರಿಯಲ್ಲ. ಈ ಸಂಬಂಧ ಸೂಚನೆ ನೀಡಲಾಗುವುದು,” ಎಂದರು.

ಕಟೀಲ್‌ಗೂ ಶಹಬ್ಬಾಸ್‌ ಎಂದ ಸಿಂಗ್‌

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯೂ ಇಲ್ಲವೆಂದು ಇದೇ ವೇಳೆ ಹೇಳಿದ ಅರುಣ್‌ ಸಿಂಗ್‌ ”ಸಂಘಟನೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ ಇಬ್ಬರನ್ನೂ ಬದಲಿಸುವ ಪ್ರಶ್ನೆಯಿಲ್ಲ. ಈ ಸಂಬಂಧ ಸುದ್ದಿಯಾಗಿರುವುದು ಕೇವಲ ಊಹಾಪೋಹವಷ್ಟೇ,” ಎಂದು ತಳ್ಳಿ ಹಾಕಿದರು.

ಮೂರು ದಿನದ ಕಸರತ್ತಿನ ಕುತೂಹಲ
ಸಿಎಂ ಬಿಎಸ್‌ವೈ ಹೇಳಿಕೆ ಹಾಗೂ ಅತೃಪ್ತ ಶಾಸಕರ ಗುಂಪಿನ ಚಟುವಟಿಕೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಬಿಕ್ಕಟ್ಟನ್ನು ಹೈಕಮಾಂಡ್‌ ಈ ಬಾರಿ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ರಾಜ್ಯಕ್ಕೆ ಭೇಟಿ ನೀಡುವಂತೆ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ. ಅರುಣ್‌ ಸಿಂಗ್‌ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ತಂಗಲಿದ್ದಾರೆ. ಹಾಗಾಗಿ ಈ ಕಸರತ್ತಿನ ಬಗ್ಗೆ ಕುತೂಹಲ ಕೆರಳುವಂತಾಗಿದೆ.

ನಾಯಕತ್ವದ ವಿರುದ್ಧ ಹೇಳಿಕೆ ನೀಡದಂತೆ ಈಗಾಗಲೇ ಹೈಕಮಾಂಡ್‌ ತಾಕೀತು ಮಾಡಿದೆ. ಈ ನಡುವೆಯೂ ಪರ, ವಿರೋಧ ಹೇಳಿಕೆ ನಿಂತಿಲ್ಲ. ಹಾಗಾಗಿ ಶಾಸಕರ ಬಾಯಿಗೆ ಬೀಗ ಹಾಕಬೇಕಾದ ಅಗತ್ಯವಿದೆ. ಈ ಕೆಲಸವನ್ನು ಹೈಕಮಾಂಡ್‌ ಪ್ರತಿನಿಧಿಗಳೇ ಮಾಡಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಅರುಣ್‌ ಸಿಂಗ್‌ ಅವರಿಗೆ ವಹಿಸಲಾಗಿದೆ. ಅಗತ್ಯ ಕಂಡರೆ ಅಮಿತ್‌ ಶಾ ಆಪ್ತ ವಲಯದ ಟ್ರಬಲ್‌ ಶೂಟರ್‌ ಖ್ಯಾತಿಯ ಭೂಪೇಂದ್ರ ಯಾದವ್‌ ಅವರನ್ನೂ ಕಳುಹಿಸಿ ಕೊಡಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *