ಪ್ರೇಯಸಿಯನ್ನೇ 10 ವರ್ಷ ಕತ್ತಲ ಕೋಣೆಯಲ್ಲಿ ಅಡಗಿಸಿಟ್ಟಿದ್ದ ಪ್ರಿಯಕರ; ಕೇರಳದಲ್ಲೊಂದು ವಿಚಿತ್ರ ಪ್ರೇಮಕಥೆ!

ಹೈಲೈಟ್ಸ್‌:

  • 11 ವರ್ಷ ಕತ್ತಲ ಕೋಣೆಯಲ್ಲೇ ಬದುಕು ಸವೆಸಿದ ಯುವತಿ
  • ಪ್ರೇಯಸಿಯನ್ನೇ ಕತ್ತಲ ಕೋಣೆಯಲ್ಲಿ ಅಡಗಿಸಿಟ್ಟಿದ್ದ ಪ್ರಿಯಕರ
  • ಕೇರಳದಲ್ಲೊಂದು ಅಂತರ್‌ಧರ್ಮೀಯ ಪ್ರೇಮಕಥೆಯೇ ವಿಚಿತ್ರ!

ತಿರುವನಂತಪುರಂ: ಹನ್ನೊಂದು ವರ್ಷದ ಹಿಂದೆ ಕಣ್ಮರೆಯಾಗಿ ಇನ್ನೆಂದೂ ವಾಪಸ್‌ ಬರುವುದಿಲ್ಲ ಎಂದು ಅಂದುಕೊಂಡಿದ್ದ ಮಗಳು, ಮನೆಯಿಂದ ಕೇವಲ 500 ಮೀಟರ್‌ ದೂರದ ಕೊಠಡಿಯೊಂದರಲ್ಲಿ ಅಜ್ಞಾತವಾಗಿ ವಾಸವಿದ್ದಳು ಎಂಬ ವಿಷಯ ತಿಳಿದ ಪೋಷಕರೇ ಕಣ್‌ಕಣ್‌ಬಿಟ್ಟು ನೋಡುವಂತಾಗಿದೆ.

ಸತತ ಹುಡುಕಾಟದ ಬಳಿಕವೂ ಪತ್ತೆಯಾಗದ ಆಕೆ ಅನ್ಯ ಧರ್ಮೀಯ ಪ್ರಿಯತಮನ ಜತೆ ನಿಗೂಢವಾಗಿ 10 ವರ್ಷ ಕಾಲ ಜೀವನ ನಡೆಸಿರುವುದು ತನಿಖೆ ನಡೆಸಿದ ಪೊಲೀಸರನ್ನೇ ಬೇಸ್ತು ಬೀಳಿಸಿದೆ. ಈ ಘಟನೆ ನಡೆದಿರುವುದು ಕೇರಳದ ಪಾಲಕ್ಕಾಡ್‌ನ ಅಯಲೂರ್‌ ಗ್ರಾಮದಲ್ಲಿ. ಸಜಿತಾ ಎಂಬ ಯುವತಿ ತನ್ನ 18ನೇ ವರ್ಷದಲ್ಲಿ ಪೇಂಟರ್‌ ವೃತ್ತಿ ಮಾಡುತ್ತಿದ್ದ ಪಕ್ಕದ ಮನೆಯ ರೆಹಮಾನ್‌ ಎಂಬುವನನ್ನು ಪ್ರೀತಿಸಿದ್ದಳು. ಅಂತರ್‌ ಧರ್ಮೀಯ ಪ್ರೇಮವಾಗಿರುವ ಕಾರಣ ಮನೆ ಹಾಗೂ ಊರ ಜನರಿಗೆ ಗೊತ್ತಾದರೆ ಅಪಾಯ ಎಂದು ಅಂದುಕೊಂಡ ಸಜಿತಾ 2010ರಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದಳು. ಆಕೆಯ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಎಲ್ಲ ಕಡೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಆಕೆಯ ಸುಳಿವೇ ಸಿಕ್ಕಿರಲಿಲ್ಲ. ಅಂತಿಮವಾಗಿ ಆಕೆ ಯಾರೊಂದಿಗೊ ತಮಿಳುನಾಡಿಗೆ ಓಡಿ ಹೋಗಿರಬಹುದು ಎಂದು ಅಂದುಕೊಂಡ ಮನೆಯವರು ಸುಮ್ಮನಿದ್ದರು.

ಕಿಟಕಿಯೇ ರಾಜ ಮಾರ್ಗ: ಮನೆ ಬಿಟ್ಟು ಹೊರಬಂದಿದ್ದ ತರುಣಿ ಸಜಿತಾ, ನೇರ ಸೇರಿಕೊಂಡಿದ್ದು ಪ್ರಿಯಕರ ರೆಹಮಾನ್‌ ಮನೆಯ ಕೋಣೆಗೆ. ಕತ್ತಲ ಕೂಪದಂತಿರುವ ಆ ಕೊಠಡಿಯಲ್ಲೇ ಆಕೆ ಅಷ್ಟು ವರ್ಷ ಕಾಲ ಅಜ್ಞಾತಳಾಗಿ ಜೀವನ ನಡೆಸಿದ್ದಳು. ತೊಟ್ಟ ಬಟ್ಟೆಗಳನ್ನು ಒಗೆದು ಒಳಗೇ ಒಣಗಿಸುತ್ತಿದ್ದಳೇ ಹೊರತು ಒಂದು ದಿನವೂ ಹೊರಗೆ ತಲೆ ಹಾಕಿರಲಿಲ್ಲ. ಕೊಠಡಿಯ ಕಿಟಕಿಯ ಎರಡು ಸರಳುಗಳನ್ನು ಬಗ್ಗಿಸಿ, ರಾತ್ರಿಯಲ್ಲಿ ಹೊರಗೆ ಬಂದು ನಿತ್ಯ ಕರ್ಮಗಳನ್ನು ಮುಗಿಸುತ್ತಿದ್ದಳು. ಸಣ್ಣದಾದ ಟಿವಿಯೊಂದನ್ನು ಇಟ್ಟುಕೊಂಡು ಹೊರ ಜಗತ್ತಿನ ಬಗ್ಗೆ ತಿಳಿದುಕೊಳ್ಳುತ್ತಿದ್ದಳು. ರೆಹಮಾನ್‌ ತಂದುಕೊಟ್ಟಿದ್ದನ್ನು ತಿಂದು ಜೀವಿಸುತ್ತಿದ್ದಳು. ಪ್ರಿಯಕರ ರಹಮಾನ್‌ ತನ್ನ ಕೋಣೆಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಮನೆ ಮಂದಿಯೂ ಒಳಗೆ ಬರಲು ಯತ್ನಿಸಿದ್ದರೆ ವ್ಯಗ್ರನಾಗುತ್ತಿದ್ದ. ಸಹೋದರ ಬಶೀರ್‌ ಕೂಡ ರೆಹಮಾನ್‌ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

ಹಲವು ವರ್ಷಗಳಿಂದ ಆತ ಹುಚ್ಚನಂತೆ ವರ್ತಿಸುತ್ತಿದ್ದ ಎಂದೇ ಹೇಳುತ್ತಿದ್ದ. ಆದರೆ, ತನ್ನ ಕೋಣೆಯಲ್ಲಿ ಯುವತಿಯೊಬ್ಬಳನ್ನು ಇಟ್ಟುಕೊಂಡಿರುವ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈ ನಡುವೆ ರೆಹಮಾನ್‌ಗೆ ಆತನ ಪೋಷಕರು ಮದುವೆಯಾಗುವಂತೆ ಒತ್ತಾಯ ಮಾಡಿದ್ದರು. ಆದರೂ ತನ್ನ ಪ್ರೇಮದ ಕತೆಯನ್ನು ಹೇಳಿರಲಿಲ್ಲ. ಏತನ್ಮಧ್ಯೆ, ಸಜಿತಾ ಕತ್ತಲ ಕೋಣೆಯಿಂದ ಹೊರಬಂದು ಪಕ್ಕದ ಊರಿಗೆ ಹೋಗಿದ್ದಳು. ರೆಹಮಾನ್‌ ಕೂಡ ಹಿಂಬಾಲಿಸಿದ್ದ. ವಿಷಯ ತಿಳಿದ ಮೇಲೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರುಪಡಿಸಿದ್ದು, ಅಲ್ಲವರು ತಾವು ಮದುವೆಯಾಗುವುದಾಗಿ ಹೇಳಿದ್ದಾರೆ. ಕೋರ್ಟ್‌ ಅದಕ್ಕೆ ಒಪ್ಪಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *