Ramdev: ಕೊರೋನಾ ಲಸಿಕೆ ಪಡೆಯುತ್ತೇನೆ ಎಂದ ಬಾಬಾ ರಾಮದೇವ್; ವೈದ್ಯರೇ ದೇವದೂತರು ಎಂದು ಯೂಟರ್ನ್!

ನವದೆಹಲಿ(ಜೂ.11) ತನಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೊರೋನಾ ಲಸಿಕೆ ಪಡೆಯಲ್ಲ ಎಂದು ಹೇಳಿದ್ದ ಖ್ಯಾತ ಯೋಗ ಗುರು ಬಾಬಾ ರಾಮ್​ ದೇವ್​, ಈಗ ಯೂಟರ್ನ್​ ಹೊಡೆದಿದ್ದಾರೆ. ವೈದ್ಯರು ಭೂಲೋಕದ ದೇವದೂತರು ಎಂದು ಡಾಕ್ಟರ್ಸ್​​ನ್ನು ಹೊಗಳಿ, ನಾನು ಆದಷ್ಟು ಬೇಗ ಕೋವಿಡ್ ಲಸಿಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಬಾಬಾ ರಾಮ್​ ದೇವ್​ ಇತ್ತೀಚೆಗೆ ಅಲೋಪತಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಯೂಟರ್ನ್ ಹೊಡೆದಿರುವ ಬಾಬಾ ರಾಮ್​ದೇವ್, ವೈದ್ಯರನ್ನು ಭೂಮಿಯ ಮೇಲಿನ ದೇವಧೂತರು ಎಂದೆಲ್ಲಾ ಹೊಗಳಿದ್ದಾರೆ. ಜೊತೆಗೆ ಕೋವಿಡ್ ಲಸಿಕೆ ಪಡೆಯಲ್ಲ ಎಂದಿದ್ದ ಅವರು, ಈಗ ಶೀಘ್ರದಲ್ಲೇ ವ್ಯಾಕ್ಸಿನ್​​ ಕೂಡ ಪಡೆಯುವುದಾಗಿ ಹೇಳಿದ್ದಾರೆ.

ಜೂನ್​ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿರುವ ಪ್ರಧಾನಿ ಮೋದಿಯವರ ಘೋಷಣೆಯನ್ನು ಬಾಬಾ ರಾಮ್​​ದೇವ್ ಅವರು ಸ್ವಾಗತಿಸಿದ್ದಾರೆ. ಇದೊಂದು ಐತಿಹಾಸಿಕ ಹೆಜ್ಜೆ ಎಂದು ಹೇಳಿರುವ ಅವರು, ಎಲ್ಲರೂ ವ್ಯಾಕ್ಸಿನ್ ಪಡೆಯುವಂತೆ ಮನವಿ ಮಾಡಿದ್ದಾರೆ.

ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತುಸೇವೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಅಲೋಪತಿ ಉತ್ತಮ ಎಂದು ಹೇಳಿದ ಬಾಬಾ ರಾಮ್ ದೇವ್, ಯೋಗ, ಆಯುರ್ವೇದ ಜೊತೆಗೇ ಎರಡೂ ಡೋಸ್ ಕೋವಿಡ್ ಲಸಿಕೆಯನ್ನೂ ಹಾಕಿಸಿಕೊಳ್ಳಿ.. ಇದು ನಿಮ್ಮ ದೇಹವನ್ನು ಕೊರೋನಾ ವೈರಸ್ ವಿರುದ್ಧದ ರಕ್ಷಣಾ ಕೋಟೆಯನ್ನಾಗಿ ಮಾರ್ಪಡಿಸುತ್ತದೆ. ಆಗ ಒಂದೇ ಒಂದು ಸಾವು ಕೂಡ ಕೋವಿಡ್ ವೈರಸ್ ನಿಂದ ಸಂಭವಿಸದು ಎಂದ ಅವರು, ನಾನು ಕೂಡ ಅತೀ ಶೀಘ್ರದಲ್ಲೇ ಕೊರೋನಾ ಲಸಿಕೆ ಪಡೆಯುತ್ತೇನೆ ಎಂದು ಹೇಳಿದರು.

ಈ ಹಿಂದೆ ರಾಮ್​ ದೇವ್, ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈ ವರೆಗೂ ಸಾವನ್ನಪ್ಪಿದ್ದಾರೆ. ಡಿಸಿಜೈ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ ಎಂದು ಹೇಳಿದ್ದರು.

ಅಲೋಪತಿ ಒಂದು ಅವಿವೇಕದ ವಿಜ್ಞಾನ. ಅಲೋಪತಿ ಔಷಧಗಳನ್ನು ತೆಗೆದುಕೊಂಡ ಬಳಿಕ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿ ಬಾಬಾ ರಾಮ್​ದೇವ್ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. ಅಲೋಪತಿ ವೈದ್ಯ ಪದ್ಧತಿ ಬಗ್ಗೆ ತಿಳುವಳಿಕೆ ಇಲ್ಲದೇ ಮಾತನಾಡುತ್ತಿರುವ ಬಾಬಾ ರಾಮ್​​​ದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಕೇಂದ್ರ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿತ್ತು. ಬಳಿಕ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿಕೆ ಹಿಂಪಡೆಯುವಂತೆ ಬಾಬಾ ರಾಮ್​ದೇವ್​ಗೆ ಸೂಚಿಸಿದ್ದರು. ಸಚಿವರ ಅಸಮಾಧಾನದ ಬೆನ್ನಲ್ಲೇ ಯೋಗಗುರು ತಮ್ಮ ಹೇಳಿಕೆ ಹಿಂಪಡೆದಿದ್ದರು

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *