ಕಲಬುರಗಿ : ಅನ್ ಲಾಕ್ ಘೋಷಣೆಗೆ ಮುನ್ನವೇ ಜನರ ಓಡಾಟ ಹೆಚ್ಚಳ
ಕಲಬುರಗಿ,ಜೂ.12-ಅನ್ ಲಾಕ್ ಘೋಷಣೆಗೆ ಮುನ್ನವೇ ನಗರದಲ್ಲಿ ವಾಹನಗಳ ಮತ್ತು ಜನರ ಓಡಾಟ ಹೆಚ್ಚಳವಾಗಿದೆ. ಕೊರೊನಾ ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಜೂ.14ರ ನಂತರ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವುಗೊಳಿಸಲು ಚಿಂತನೆ ನಡೆಸಿದೆ. ಆದರೆ ಅನ್ ಲಾಕ್ ಗೂ ಮುನ್ನವೇ ಜನರ ಓಡಾಟ ಹೆಚ್ಚಾಗಿರುವುದು ಮಾತ್ರ ಆತಂಕ ಮೂಡಿಸಿದೆ.
ಇಂದು ನಗರದ ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ ಸೇರಿದಂತೆ ಹಲವು ಕಡೆ ವಾಹನಗಳ ಓಡಾಟದ ಜೊತೆಗೆ ಜನಸಂದಣಿ ಹೆಚ್ಚಾಗಿರುವುದು ಕಂಡುಬಂತು. ಲಾಕ್ ಡೌನ್ ತೆರವಿಗೂ ಮುನ್ನವೇ ಜನ ಎಗ್ಗಿಲ್ಲದೆ ಓಡಾಡುತ್ತಿರುವುದು ಕೊರೊನಾ ಸೋಂಕು ಮತ್ತಷ್ಟು ಹರಡಬಹುದೆಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿಸಿದೆ.
ಅನ್ ಲಾಕ್ ಇನ್ನೂ ಘೋಷಣೆಯಾಗಿಲ್ಲ. ಆದರೆ ಜನ ಮಾತ್ರ ಲಾಕ್ ಡೌನ್ ತೆರವಾಗಿದೆ ಎನ್ನುವ ರೀತಿಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಕೋವಿಡ್ ಸೋಂಕು ಹರಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲಾಕ್ ಡೌನ್ ತೆರವಾಗುವವರೆಗಾದರೂ ಜನರ ಮತ್ತು ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವುದರ ಮೂಲಕ ಕೋವಿಡ್ ಸೋಂಕು ಹರಡದಂತೆ ತಡೆಯಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವೊಂದು ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.