ಕೊರೊನಾ 3 ನೇ ಅಲೆಗೆ ಸಿದ್ಧತೆ: ಸೋಂಕಿತ ಮಕ್ಕಳಿಗಾಗಿ ಕೇಂದ್ರದ ಕೋವಿಡ್ ಚಿಕಿತ್ಸಾ ಮಾರ್ಗಸೂಚಿಗಳು ಹೀಗಿದೆ..

ದೇಶವನ್ನು ರಣಭೀಕರವಾಗಿ ಕಾಡಿದ ಎರಡನೇ ಅಲೆ ಬಹುತೇಕ ರಾಜ್ಯಗಳಲ್ಲಿ ಕಡಿಮೆಯಾಗುತ್ತಿದ್ದರೂ ಇನ್ನೂ ಆತಂಕ ಇದೆ. ಆದರೆ, ಈ ನಡುವೆ ಮೂರನೇ ಅಲೆ ಯಾವಾಗ ವಕ್ಕರಿಸಲಿದೆಯೋ ಎಂಬ ಭಯ ಕೇವಲ ಸರ್ಕಾರಕ್ಕೆ ಮಾತ್ರವಲ್ಲ ಪೋಷಕರಿಗೂ ಹೆಚ್ಚಿದೆ. ಏಕೆಂದರೆ ಕೊರೊನಾ ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚು ಕಾಡಲಿದೆ ಎಂಬ ವರದಿಗಳು. ಕೋವಿಡ್ – 19 ವಿಚಾರದಲ್ಲಿ ಸಾಕಷ್ಟು ಟೀಕೆಗೊಳಗಾಗುತ್ತಿರುವ ಮೋದಿ ಸರ್ಕಾರವೂ ಮೂರನೇ ಅಲೆಗೆ ಸಿದ್ಧವಾಗಲು ಹೆಜ್ಜೆ ಇಟ್ಟಿದೆ. ಇದರ ಅನುಗುಣವಾಗಿ ಮಕ್ಕಳಲ್ಲಿ ಕೋವಿಡ್ -19 ಅನ್ನು ನಿರ್ವಹಿಸುವ ಮಾರ್ಗಸೂಚಿಗಳ ಪಟ್ಟಿಯನ್ನು ಕೇಂದ್ರವು ಬುಧವಾರ ತಡರಾತ್ರಿ ಬಿಡುಗಡೆ ಮಾಡಿದೆ.

 

ಕೊರೋನಾ ಸೋಂಕಿತ ಮಕ್ಕಳಿಗೆ ಆ್ಯಂಟಿ- ವೈರಲ್‌ ಔಷಧಿ ರೆಮ್ಡೆಸಿವಿರ್ ಅನ್ನು ಬಳಸದಂತೆ ಆರೋಗ್ಯ ಸೇವೆಗಳ ನಿರ್ದೇಶನಾಲಯ ಜನರಲ್ ಸಲಹೆ ನೀಡಿದೆ. ಮಕ್ಕಳಿಗೆ ಅಂತಹ ಯಾವುದೇ ಬೆದರಿಕೆಯನ್ನು ಸೂಚಿಸುವ ಡೇಟಾ ಇಲ್ಲ ಎಂದು ರಾಷ್ಟ್ರೀಯ ಕೊರೊನಾವೈರಸ್‌ ಟಾಸ್ಕ್‌ ಫೋರ್ಸ್‌ನೊಂದಿಗೆ ಭಾಗಿಯಾಗಿರುವ ದೇಶದ ಟಾಪ್‌ ವೈದ್ಯರು ಹೇಳಿದ್ದರೂ, ಈ ಹೊಸ ನಿಯಮಗಳು ಬಿಡುಗಡೆಯಾಗಿದೆ.

 

ಇನ್ನು, ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ 60-70 ಪ್ರತಿಶತದಷ್ಟು ಮಕ್ಕಳು ಸಹ-ಅಸ್ವಸ್ಥತೆಗಳು ಅಥವಾ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರು. ಆದರೆ, ಆರೋಗ್ಯವಂತ ಮಕ್ಕಳಿಗೆ ಲಘು ಅನಾರೋಗ್ಯವಾಗಿತ್ತು. ಈ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರಲಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ.

 

ಮುಂದಿನ ಅಲೆ ಮಕ್ಕಳ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುತ್ತವೆ ಎಂಬುದು ಖಚಿತವಾಗಿಲ್ಲ ಎಂದು ಡಾ. ವಿ.ಕೆ. ಪಾಲ್‌ ಹೇಳಿದ್ದಾರೆ. ”ಈವರೆಗೆ, ಮಕ್ಕಳು ವಯಸ್ಕರಂತೆಯೇ ಸಿರೋಪ್ರೆವೆಲೆನ್ಸ್ ಅನ್ನು ಪ್ರದರ್ಶಿಸಿದ್ದಾರೆ. ಅಂದರೆ, ವಯಸ್ಕರಷ್ಟೇ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ” ಎಂದೂ ಹೇಳಿದರು.

 

ಮಕ್ಕಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಇಲ್ಲಿವೆ:

 

ಸೌಮ್ಯ ಪ್ರಮಾಣದ ಸೋಂಕು
– ಸೋಂಕಿನ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಸ್ಟಿರಾಯ್ಡ್‌ಗಳು ಹಾನಿಕಾರಕ ಮತ್ತು ಆ್ಯಂಟಿ-ಮೈಕ್ರೋಬಿಯಲ್‌ಗಳನ್ನು ಚಿಕಿತ್ಸೆ ಅಥವಾ ರೋಗನಿರೋಧಕಕ್ಕೆ ಶಿಫಾರಸು ಮಾಡುವುದಿಲ್ಲ.

– ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕಬದ್ಧ ಬಳಕೆಯನ್ನು ಶಿಫಾರಸು ಮಾಡಲಾಗಿದೆ.

 

– ಸೌಮ್ಯವಾದ ಸೋಂಕುಳ್ಳವರಿಗೆ ಜ್ವರ ಬಂದರೆ ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಪ್ಯಾರೆಸಿಟಮಾಲ್ ಮತ್ತು ಗಂಟಲಿಗೆ ಹಿತವಾದ ಏಜೆಂಟ್‌ಗಳನ್ನು ನೀಡಬಹುದು. ಕೆಮ್ಮು ಇದ್ದರೆ ವಯಸ್ಸಾದ ಮಕ್ಕಳು ಮತ್ತು ಹದಿಹರೆಯದವರಿಗೆ ಬೆಚ್ಚಗಿನ ಲವಣಯುಕ್ತ ಗಾರ್ಗಲ್‌ ಮಾಡಲು ಶಿಫಾರಸು ಮಾಡಲಾಗಿದೆ.

ಮಧ್ಯಮ ಪ್ರಮಾಣದ ಸೋಂಕು
– ಮಧ್ಯಮ ಪ್ರಮಾಣದ ಸೋಂಕಿನ ಸಂದರ್ಭದಲ್ಲಿ, ತಕ್ಷಣದ ಆಮ್ಲಜನಕ ಚಿಕಿತ್ಸೆಯನ್ನು ಪ್ರಾರಂಭಿಸಲು ಮಾರ್ಗಸೂಚಿಗಳು ಸೂಚಿಸುತ್ತವೆ.

– ಮಧ್ಯಮ ಕಾಯಿಲೆ ಇರುವ ಎಲ್ಲ ಮಕ್ಕಳಲ್ಲಿ ಕಾರ್ಟಿಕೊಸ್ಟೆರಾಯ್ಡ್‌ಗಳ ಅಗತ್ಯವಿಲ್ಲ; ಆದರೂ ಕಾಯಿಲೆ ಹೆಚ್ಚು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದರೆ ಮಾತ್ರ ಕಾರ್ಟಿಕೊಸ್ಟೆರಾಯ್ಡ್‌ಗಳನ್ನು ನೀಡಬಹುದು ಮತ್ತು ಪ್ರತಿಕಾಯಗಳನ್ನು ಸಹ ಸೂಚಿಸಬಹುದು.

 

ತೀವ್ರ ಪ್ರಮಾಣದ ಸೋಂಕು
– ಮಕ್ಕಳಲ್ಲಿ ತೀವ್ರವಾದ ಪ್ರಕರಣಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್ ಬೆಳವಣಿಗೆಯಾದರೆ ಅಗತ್ಯ ನಿರ್ವಹಣೆಯನ್ನು ಪ್ರಾರಂಭಿಸಬೇಕು.

 

– ಆಘಾತ ಉಂಟಾದರೆ, ಅಗತ್ಯ ನಿರ್ವಹಣೆಯನ್ನು ಪ್ರಾರಂಭಿಸಬೇಕು. ಸೂಪರ್‌ಆ್ಯಡೆಡ್ ಬ್ಯಾಕ್ಟೀರಿಯಾದ ಸೋಂಕಿನ ಪುರಾವೆಗಳು ಅಥವಾ ಬಲವಾದ ಅನುಮಾನಗಳಿದ್ದಲ್ಲಿ ಆ್ಯಂಟಿಮೈಕ್ರೋಬಿಯಲ್‌ಗಳನ್ನು ನಿರ್ವಹಿಸಬೇಕು. ಒಂದು ವೇಳೆ ಮಗುವಿನ ಅಂಗ ಡಿಸ್‌ಫಂಕ್ಷನ್‌ ಆದರೆ ಅಂಗದ ಬೆಂಬಲ ಬೇಕಾಗಬಹುದು ಎಂದೂ ಮಾರ್ಗಸೂಚಿ ಹೇಳುತ್ತದೆ.

– ಅಲ್ಲದೆ, ಹೃದಯರಕ್ತನಾಳದ ವ್ಯಾಯಾಮ ಸಹಿಷ್ಣುತೆಯನ್ನು ನಿರ್ಣಯಿಸಲು ಪೋಷಕರು / ಗಾರ್ಡಿಯನ್‌ಗಳ ಮೇಲ್ವಿಚಾರಣೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ 6 ನಿಮಿಷಗಳ ನಡಿಗೆ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿದೆ. ಎರಡನೇ ಅಲೆಯಲ್ಲಿ ಯುವಕರಲ್ಲಿ ಹೆಚ್ಚಾಗಿ ಕಂಡು ಬಂದ ಹೈಪೋಕ್ಸಿಯಾ ವಿರುದ್ಧ ಹೋರಾಡಲು ಇದನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮಕ್ಕಳ ಬೆರಳಿಗೆ ಪಲ್ಸ್ ಆಕ್ಸಿಮೀಟರ್‌ ಇರಿಸಿ ಮತ್ತು ಮಗುವಿಗೆ ತನ್ನ ಕೋಣೆಯಲ್ಲೇ ನಡೆಯುವಂತೆ ಸೂಚಿಸಬೇಕು ಎಂದೂ ಕೇಂದ್ರ ಸರ್ಕಾರ ನೀಡಿರುವ ಈ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *