Karnataka Lockdown | ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು ಸೇರಿ 11 ಜಿಲ್ಲೆಗಳಲ್ಲಿ ಇಂದಿನಿಂದ 1 ವಾರ ಲಾಕ್ಡೌನ್ ವಿಸ್ತರಣೆ
ಬೆಂಗಳೂರು (ಜೂನ್ 14): ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದಿನಿಂದ ಅನ್ಲಾಕ್ ಘೋಷಣೆಯಾಗಿದೆ. ಆದರೆ, ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವ ಶಿವಮೊಗ್ಗ, ಮಂಡ್ಯ, ದಕ್ಷಿಣ ಕನ್ನಡ ಸೇರಿ 11 ಜಿಲ್ಲೆಗಳಲ್ಲಿ ಇಂದಿನಿಂದ ಜೂನ್ 21ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಈ ಮೊದಲು ಜಾರಿಯಲ್ಲಿದ್ದ ಲಾಕ್ಡೌನ್ ನಿಯಮಗಳೇ ಇಂದಿನಿಂದ ಮತ್ತೆ ಮುಂದುವರೆಯಲಿದೆ. ಅಗತ್ಯವಿದ್ದರೆ ಇನ್ನಷ್ಟು ಕಟ್ಟುನಿಟ್ಟಿನ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಲು ಕೂಡ ಅವಕಾಶ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ (ಜೂನ್ 14) 1 ವಾರಗಳ ಕಾಲ (ಜೂನ್ 21) ಲಾಕ್ಡೌನ್ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಇಂದಿನಿಂದ (ಜೂನ್ 14ರಿಂದ) ಹಂತ ಹಂತವಾಗಿ ಕ್ರಮೇಣ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತವಾಗಿ ಬೆಂಗಳೂರು, ಮೈಸೂರು ಸೇರಿ 19 ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ಡೌನ್ ಮುಂದುವರೆಯಲಿದೆ. ಪ್ರಸ್ತುತ ಮಾರ್ಗಸೂಚಿಯಲ್ಲಿ ಜಾರಿಯಲ್ಲಿರುವ ನಿಯಮಗಳು ಈ ಜಿಲ್ಲೆಗಳಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಈಗಾಗಲೇ ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳ ಮಾರ್ಗಸೂಚಿಗಳು ಈ 11 ಜಿಲ್ಲೆಗಳಿಗೆ ಅನ್ವಯವಾಗಲಿವೆ. ಅಗತ್ಯವಿದ್ದರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಉಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅಂದರೆ, ಅನ್ಲಾಕ್ ಆದರೂ ಕೆಲವು ವಲಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಕೆಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ಮೊದಲಿನ ಲಾಕ್ಡೌನ್ ಮಾರ್ಗಸೂಚಿಯನ್ನು ಜೂ. 21ರವರೆಗೆ ಮುಂದುವರೆಯಲಿದೆ. ಜೂನ್ 21ರ ಬಳಿಕ ಕೊರೋನಾ ಕೇಸುಗಳು ಕಡಿಮೆಯಾದರೆ ಈ 11 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡದಲ್ಲಿ ಸೀಲ್ಡೌನ್:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಕೇಸುಗಳು ಹೆಚ್ಚಾಗಿರುವ 17 ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡು ಹಾಗೂ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಸವಣೂರು ಸೇರಿದಂತೆ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮಗಳನ್ನು ಇಂದಿನಿಂದ ಜೂನ್ 21ರವರೆಗೆ ಸಂಪೂರ್ಣ ಲಾಕ್ಡೌನ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಗ್ರಾಮಗಳಾದ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿಗೆ ಒಳಪಡುವ ನಾರಾವಿ, ಕೆಯ್ಯೂರು, ಮಿತಬಾಗಿಲು, ಮಾಲಾಡಿ, ನೆರಿಯ, ಲಾಯ್ಲ, ಉಜಿರೆ, ಚಾರ್ಮಾಡಿ ಕೂಡ ಇಂದಿನಿಂದ ಸಂಪೂರ್ಣ ಲಾಕ್ಡೌನ್ ಆಗಲಿದೆ. ಈ ಗ್ರಾಮಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ, ಹಾಲಿನ ಬೂತ್, ಹಾಲು ಸೊಸೈಟಿಗಳಲ್ಲಿ ಹಾಲು ಖರೀದಿ, ಪೆಟ್ರೋಲ್ ಪಂಪ್, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಶಿವಮೊಗ್ಗದಲ್ಲೂ ಕಂಪ್ಲೀಟ್ ಲಾಕ್ಡೌನ್:
ಶಿವಮೊಗ್ಗ ಜಿಲ್ಲೆಯಲ್ಲೂ ಇಂದಿನಿಂದ 1 ವಾರ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಕೆಲವೊಂದು ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ಇಂದಿನಿಂದ ಬೆಳಗ್ಗೆ 6ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಶಿವಮೊಗ್ಗದಲ್ಲಿ ಕೊರೋನಾ ಪಾಟಿಸಿವಿಟಿ ದರ ಶೇ. 13ರಷ್ಟು ಇರುವುದರಿಂದ ಲಾಕ್ಡೌನ್ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ತರಕಾರಿ, ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ಇಂದಿನಿಂದ ಬೆಳಗ್ಗೆ 6ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಕೈಗಾರಿಕಾ ಚಟುವಟಿಕೆ ಈ ಮೊದಲಿನ ಮಾರ್ಗಸೂಚಿಯಂತೆಯೇ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಎಪಿಎಂಸಿಯಲ್ಲಿ ಬೆಳಗ್ಗೆ 6ರಿಂದ 8ರವರೆಗೆ ವ್ಯವಹಾರಕ್ಕೆ ಅವಕಾಶವಿದೆ.
ಅನ್ಲಾಕ್ ಘೋಷಣೆಯಾಗಿರುವ ಜಿಲ್ಲೆಗಳಲ್ಲಿ ಜೂ. 14ರಿಂದ 21ರವರೆಗೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು ದೈನಂದಿನ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇನ್ನು ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತದೆ. ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ.