Karnataka Politics: ಯಡಿಯೂರಪ್ಪ ಪರ- ವಿರೋಧಿ ಬಣದಿಂದ ಹೆಚ್ಚಿದ ಒತ್ತಡ; ಇಕ್ಕಟ್ಟಿಗೆ ಸಿಲುಕಿದ ಅರುಣ್ ಸಿಂಗ್

ನವದೆಹಲಿ, ಜೂ. 14: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೊಸ ರೀತಿಯ ಸಮಸ್ಯೆ ಶುರುವಾಗಿದೆ.‌ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪುಗಳು ಹೇರುತ್ತಿರುವ ಒತ್ತಡದಿಂದ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎರಡೂ ಪಾಳೆಯದಿಂದ ದೂರುಗಳ ಸುರಿಮೆಳೆ ಗೈಯ್ಯಲು ತಯಾರಿ ನಡೆದಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಜೂನ್ 16ರಂದು ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು ಅಂದು ಸಚಿವರ ಸಭೆ ನಡೆಸಲಿದ್ದಾರೆ. ಇದಲ್ಲದೆ ಜೂನ್ 18ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಯಡಿಯೂರಪ್ಪ ವಿರೋಧಿ ಬಣ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸುತ್ತಿದೆ. ಯಡಿಯೂರಪ್ಪ ಕಡೆಯವರು ಕೊರೋನಾ ಕಾರಣ ಕೊಟ್ಟು ಶಾಸಕಾಂಗ ಪಕ್ಷದ ಸಭೆ ಬೇಡ ಎಂದು ಹೇಳುತ್ತಿದ್ದಾರೆ. ಹೀಗೆ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರದಲ್ಲಿ ಎರಡೂ ಕಡೆಯಿಂದ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎರಡೂ ಪಾಳೆಯವನ್ನು ತೃಪ್ತಿಗೊಳಿಸಲು ಜೂನ್ 17ರಂದು ಶಾಸಕಾಂಗ ಪಕ್ಷದ ಸಭೆಯ ಬದಲಿಗೆ ‘ಶಾಸಕರ ಸಭೆ’ ಕರೆಯಲು ನಿಶ್ಚಯಿಸಲಾಗಿದೆ ಎಂದು ತಿಳಿದುಬಂದಿದೆ.

ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಕ್ರಿಯವಾಗಿರುವ ಯಡಿಯೂರಪ್ಪ ವಿರೋಧಿ ಬಣ ಶಾಸಕರ ಸಭೆಗೆ ವಿರೋಧ ವ್ಯಕ್ತಪಡಿಸಿದ್ದು ಶಾಸಕಾಂಗ ಪಕ್ಷದ ಸಭೆಯನ್ನೇ ನಡೆಸುವಂತೆ ಒತ್ತಡ ಹೇರುವುದನ್ನು ಮುಂದುವರೆಸಿದೆ. ದೆಹಲಿಗೆ ಬಂದು ಹೈಕಮಾಂಡ್ ಮೂಲಕ ಒತ್ತಡ ಹೇರಿರುವ ಬಂಡಾಯ ನಾಯಕ ಅರವಿಂದ ಬೆಲ್ಲದ ಮೂಲಕ ಶಾಸಕಾಂಗ ಪಕ್ಷದ ಸಭೆ ಕೆರಯುವಂತೆ ಒತ್ತಡ ಹೇರಲಾಗುತ್ತಿದೆ. ದೆಹಲಿಯಲ್ಲಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತಿತರ ನಾಯಕರನ್ನು ಭೇಟಿಯಾಗಿರುವ ಅರವಿಂದ ಬೆಲ್ಲದ ಬೆಂಗಳೂರಿಗೆ ಮರಳಿದ ಮೇಲೆ ಮತ್ತಷ್ಟು ಬೆಳವಣಿಗೆ ಆಗುವ ಸಾಧ್ಯತೆ ಇದೆ.

ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಲು ತುದಿಗಾಲಲ್ಲಿ ನಿಂತಿರುವ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.‌ ಯೋಗೇಶ್ವರ್, ಹೆಚ್. ವಿಶ್ವನಾಥ್, ಅರವಿಂದ ಬೆಲ್ಲದ, ತಿಪ್ಪಾರೆಡ್ಡಿ ಮತ್ತಿತರರ ದಂಡೇ ಇದೆ. ಎಲ್ಲರೂ ಸೇರಿ  ಯಡಿಯೂರಪ್ಪ ವಿರುದ್ದ ಚಾರ್ಜ್ ಶೀಟ್ ಸಿದ್ದಪಡಿಸಿಕೊಳ್ಳುತ್ತಿರುವ ಮಾಹಿತಿ ಈಗಾಗಲೇ ಅರುಣ್ ಸಿಂಗ್ ಅವರಿಗೂ ಸಿಕ್ಕಿದೆ ಎಂದು ತಿಳಿದುಬಂದಿದೆ. ಆದುದರಿಂದ ಜೂನ್ 17ರಂದು ನಡೆಯಲಿರುವ ಶಾಸಕರ ಸಭೆಯಲ್ಲಿ ಭಿನ್ನಮತ ಸ್ಫೋಟ ಸಾಧ್ಯತೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *