ಕಲಬುರಗಿ : ವೀರಶೈವ ಲಿಂಗಾಯತರ ಮುಖಂಡರ ವಿರುದ್ಧ ಜಾತಿ ನಿಂದನೆ ಕಾಯ್ದೆ ದುರ್ಬಳಕೆ ವಿರೋಧಿಸಿ ಧರಣಿ
ಕಲಬುರಗಿ,ಜೂ.15: ವೀರಶೈವ ಲಿಂಗಾಯತ ಮುಖಂಡರ ಮೇಲೆ ಎಸ್ಸಿ, ಎಸ್ಟಿ ಜಾತಿ ನಿಂದನೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಸೋಮವಾರ ನಗರದ ಜಗತ್ ವೃತ್ತದಲ್ಲಿನ ಬಸವೇಶ್ವರರ ಪ್ರತಿಮೆಯ ಮುಂದೆ ವೀರಶೈವ ಲಿಂಗಾಯತ ಯುವ ವೇದಿಕೆಯ ಪದಾಧಿಕಾರಿಗಳು ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ರಾಜಕೀಯವಾಗಿ ವೈಮನಸ್ಸುಗಳಿಗೆ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಮತ್ತು ಯುವ ಮುಖಂಡರ ಮೇಲೆ ಪದೇ ಪದೇ ಕಾನೂನು ದುರ್ಬಳಕೆ ಮಾಡಿಕೊಂಡು ಸಮಾಜಘಾತುಕರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ದೂರಿದರು.
ಇಂತಹುದಕ್ಕೆ ಆರಕ್ಷಕ ಅಧಿಕಾರಿಗಳು ಸ್ವಜಾತಿ ಪ್ರೇಮದಿಂದ ಕಾನೂನು ಕ್ರಮ ಸರಿಯಾಗಿ ಪಾಲನೆ ಮಾಡದೇ ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಗುರಿಯಾಗಿರಿಸಿಕೊಂಡು ತುಳಿಯುವಂತಹ ಕೆಲಸ ಕಳೆದ ಕೆಲ ದಶಕಗಳಿಂದ ನಡೆದುಕೊಂಡು ಬಂದಿದ್ದು, ಈಗ ಅದು ಹೆಚ್ಚಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಸುಮಾರು ವರ್ಷಗಳಿಂದ ಜನಸೇವೆಯೇ ಜನಾರ್ಧನ್ ಸೇವೆಯೆಂದು ಎಲ್ಲ ಸಮುದಾಯದವರನ್ನು ಪ್ರೀತಿಸುತ್ತ ಸೇವೆಗೈಯುತ್ತಿರುವ ನರಿಬೋಳ್ ಕುಟುಂಬದ ಸಹೋದರರ ವಿರುದ್ಧ ರಾಜಕೀಯ ವೈಷಮ್ಯಕ್ಕೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿಯಾಗಿ ಸಮಾಜದ ಯುವ ಮುಖಂಡ ಗುರುಶಾಂತ್ ಟೆಂಗಳಿ ಮತ್ತು ಶರಣಪ್ಪ ರೆಡ್ಡಿ ಅವರ ಮೇಲೆ ಕೂಡ ಕಳೆದ ಮೂರು ತಿಂಗಳು ಹಿಂದೆ ಉದ್ದೇಶಪೂರ್ವಕವಾಗಿ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಸಹೋದರತ್ವದಿಂದ ಬಾಳುತ್ತಿರುವ ಸಮಾಜದ ನಡುವೆ ವಿಷಬೀಜ ಬಿತ್ತುವಂತಹ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಕೆಲಸವನ್ನು ಸಮಾಜಘಾತುಕರು ಮಾಡುತ್ತಿದ್ದು, ಸಮುದಾಯ, ಸಮುದಾಯಗಳ ನಡುವೆ ಜಗಳ ಹಚ್ಚುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಅಂತಹ ಸುಳ್ಳು ಪ್ರಕರಣ ದಾಖಲಿಸುತ್ತಿರುವ ವ್ಯಕ್ತಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಿಶೇಷ ತನಿಖಾಧಿಕಾರಿಗಳನ್ನು ನೇಮಿಸಿ ಆ ಕುರಿತು ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ ಅವರು, ಕೂಡಲೇ ತಪ್ಪಿತಸ್ಥ ಸಿಬ್ಬಂದಿಗಳನ್ನು ಅಮಾನತ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಸಮುದಾಯದ ಮೇಲಿನ ಅನ್ಯಾಯವನ್ನು ಸರಿಪಡಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ, ಹೋಬಳಿ ಮಟ್ಟದಲ್ಲಿ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಸಹ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಅವರು ಎಚ್ಚರಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ದಯಾನಂದ್ ಪಾಟೀಲ್, ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಜಿಲ್ಲಾ ಸಂಚಾಲಕ ಸತೀಶಕುಮಾರ್ ಮಾಹೂರ್, ಜಿಲ್ಲಾ ಸಂಚಾಲಕ ಶಿವಕುಮಾರ್ ಹಡಗಿಲ್ ಮುಂತಾದವರು ಪಾಲ್ಗೊಂಡಿದ್ದರು.