Bangalore: ಬೆಂಗಳೂರು ಪ್ರವೇಶಿಸುವವರಿಗೆ ಗಡಿಯಲ್ಲೇ ಕೋವಿಡ್ ಟೆಸ್ಟ್!; ಬಿಬಿಎಂಪಿಯಿಂದ ಹೊಸ ಪ್ಲಾನ್
ಬೆಂಗಳೂರು (ಜೂನ್ 15): ಸುಮಾರು 2 ತಿಂಗಳಿನಿಂದ ಸ್ತಬ್ಧವಾಗಿದ್ದ ಬೆಂಗಳೂರಿನಲ್ಲಿ ನಿನ್ನೆಯಿಂದ ಮತ್ತೆ ಜನಸಂಚಾರ ಆರಂಭವಾಗಿದೆ. ಬೆಂಗಳೂರಿನಲ್ಲಿ ನಿನ್ನೆಯಿಂದ ಅನ್ಲಾಕ್ ಘೋಷಣೆ ಮಾಡಿರುವುದರಿಂದ ಕೆಲವು ಕಂಪನಿಗಳು, ಕಾರ್ಖಾನೆಗಳು ಪುನರ್ ಆರಂಭವಾಗಿವೆ. ಹಲವು ಅಂಗಡಿಗಳನ್ನು ಓಪನ್ ಮಾಡಲು ಸಮಯಾವಕಾಶವನ್ನು ಕೂಡ ವಿಸ್ತರಿಸಲಾಗಿದೆ. ಹೀಗಾಗಿ, ಊರುಗಳಿಗೆ ಹೋಗಿದ್ದ ಜನರು ಮತ್ತೆ ಬೆಂಗಳೂರಿನತ್ತ ವಾಪಾಸಾಗುತ್ತಿದ್ದಾರೆ. ಇದರಿಂದ ಮತ್ತೆ ಬೆಂಗಳೂರಿನಲ್ಲಿ ಕೊರೋನಾ ಕೇಸುಗಳು ಹೆಚ್ಚಾಗುವ ಆತಂಕ ಬಿಬಿಎಂಪಿಗೆ ಎದುರಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬಿಬಿಎಂಪಿ ಬೆಂಗಳೂರಿನಲ್ಲಿ ಅಲ್ಲಲ್ಲಿ ರ್ಯಾಂಡಮ್ ಕೊರೋನಾ ಪರೋಕ್ಷಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ.
ನಿನ್ನೆಯಿಂದ ಬೆಂಗಳೂರಿನಲ್ಲಿ ಕಾರ್ಖಾನೆ, ಕಂಪನಿಗಳು, ಗಾರ್ಮೆಂಟ್ಸ್ನಲ್ಲಿ ಮತ್ತೆ ಕೆಲಸಗಳು ಶುರುವಾಗಿರುವುದರಿಂದ ಬೆಂಗಳೂರಿಗೆ ಹೊರ ಊರುಗಳಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಬೆಂಗಳೂರನ್ನು ಪ್ರವೇಶಿಸುವವರು ಕೊರೋನಾ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಬೆಂಗಳೂರಿನ ಗಡಿ ಭಾಗದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ಗಳನ್ನು ತೆರೆಯಲು ಬಿಬಿಎಂಪಿ ಮುಂದಾಗಿದೆ. ಇಲ್ಲಿ ರ್ಯಾಂಡಮ್ ಕೊರೋನಾ ಟೆಸ್ಟ್ಗಳನ್ನು ನಡೆಸಲಾಗುವುದು.
ಎಲ್ಲೆಲ್ಲಿ ಟೆಸ್ಟಿಂಗ್ ಸೆಂಟರ್ ಓಪನ್?:
ಹೊರ ಜಿಲ್ಲೆಗಳಿಂದ ಬೆಂಗಳೂರನ್ನು ಪ್ರವೇಶಿಸುವ ಗಡಿ ಭಾಗಗಳಲ್ಲಿ ಕೋವಿಡ್ ಟೆಸ್ಟ್ ಸೆಂಟರ್ಗಳನ್ನು ತೆರೆಯಲಾಗುವುದು. ಹೊಸಕೋಟೆ ಗಡಿಭಾಗ, ತುಮಕೂರು ರಸ್ತೆ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಹಲವು ಕಡೆ ಸಂಚಾರಿ ಕೊರೋನಾ ಟೆಸ್ಟ್ ತಂಡಗಳು ಕಾರ್ಯ ನಿರ್ವಹಿಸಲಿವೆ.
ಕಾರ್ಖಾನೆಗಳಲ್ಲಿ ಈಗಾಗಲೇ ಶೇ. 30 ಜನರಿಗೆ ಮಾತ್ರ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಕಾರ್ಖಾನೆಗಳಿರುವ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ರ್ಯಾಂಡಮ್ ಕೋವಿಡ್ ಟೆಸ್ಟ್ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಒಂದುವೇಳೆ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲಿದ್ದರೆ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ.
ಸೋಮವಾರದಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಂಡಿದೆ. ಈ ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆಯಾಗಿದ್ದರೂ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜೂನ್ 14ರಿಂದ ಹಂತ ಹಂತವಾಗಿ ಕ್ರಮೇಣ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ವೀಕೆಂಡ್ ಕರ್ಫ್ಯೂ, ಕಂಪನಿಗಳಲ್ಲಿ ಶೇ. 50ರಷ್ಟು ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ, ಅಗತ್ಯ ವಸ್ತುಗಳ ಖರೀದಿಗೆ ಸಮಯ ವಿಸ್ತರಣೆ ಹೀಗೆ ಕೆಲವು ಹೊಸ ನಿಯಮಗಳನ್ನು ಮಾಡಲಾಗಿದೆ.ಲಾಕ್ಡೌನ್ ಸಡಿಲಗೊಂಡಿರುವ ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅಂದರೆ, ಅನ್ಲಾಕ್ ಆದರೂ ಕೆಲವು ವಲಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಕೆಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ. ಅನ್ಲಾಕ್ ಇರುವ ಜಿಲ್ಲೆಗಳ ಪರಿಷ್ಕೃತ ಮಾರ್ಗಸೂಚಿಗಳು ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಲಾಕ್ಡೌನ್ ಸಡಿಲಗೊಳ್ಳಲಿರುವ 19 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಯಾವುದಕ್ಕೆಲ್ಲ ಅನುಮತಿ? ಯಾವುದಕ್ಕೆ ನಿರ್ಬಂಧ? ಇಲ್ಲಿದೆ ಮಾಹಿತಿ…
ಯಾವುದಕ್ಕೆ ಅನುಮತಿ?:
1. ಎಲ್ಲಾ ಕಾರ್ಖಾನೆಗಳಲ್ಲಿ ಶೇ. 50ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ
2. ಗಾರ್ಮೆಂಟ್ ಕೈಗಾರಿಕೆಗಳಿಗೆ ಮಾತ್ರ ಶೇ. 30ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ.
3. ಎಲ್ಲಾ ಅಗತ್ಯ ಪದಾರ್ಥ ಖರೀದಿಸುವುದಕ್ಕೆ ಅನುವು ಮಾಡಿಕೊಡಲು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ
4. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ
ನಿಮಾಣ ಚಟುವಟಿಕೆಗೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ
5. ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ತೆರೆಯಲು ಅವಕಾಶ
6. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ
7. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಸಂಚರಿಸಲು ಅವಕಾಶ
8. ಅಗತ್ಯವಿದ್ದರೆ ಅಂತರ್ ಜಿಲ್ಲೆ ಸಂಚಾರಕ್ಕೆ ಅನುಮತಿ
9. ಅನಾರೋಗ್ಯ ಪೀಡಿತ ರೋಗಿಗಳ ತುರ್ತು ಸಂಚಾರಕ್ಕೆ ಅವಕಾಶ.
10. ಮೆಡಿಕಲ್ ಸಿಬ್ಬಂದಿಗೆ ಅವಕಾಶ
11. ಸರಕು ಸಾಗಣೆ ಮತ್ತು ಆನ್ ಲೈನ್ ಸೇವೆಗಳಿಗೆ ಅವಕಾಶ
12. ಅಂತರ್ಜಾಲ, ಟೆಲಿಕಾಂ ಸೇವೆ ಸಿಬ್ಬಂದಿ ಓಡಾಟಕ್ಕೆ ಅವಕಾಶ
13. ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಐಡಿ ಕಾರ್ಡ್ ಇಟ್ಟುಕೊಂಡು ಸಂಚಾರಕ್ಕೆ ಅವಕಾಶ
14. ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ. ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
15. ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಕನ್ನಡಕದ ಅಂಗಡಿ ತೆರೆಯಲು ಅವಕಾಶ
ಯಾವುದಕ್ಕೆ ಅನುಮತಿ ಇಲ್ಲ?:
1. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತ
2. ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೋವಿಡ್ ನೈಟ್ ಕರ್ಫ್ಯೂ ಜಾರಿ. ಈ ವೇಳೆ ಸಂಚಾರಕ್ಕೆ ನಿರ್ಬಂಧ
3. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ
4. ಅಂತರ್ ರಾಜ್ಯ ಸಂಚಾರಕ್ಕೆ ನಿರ್ಬಂಧ