ಗುರುವಾರ 20 ಶಾಸಕರಿಂದ ಅರುಣ್ ಸಿಂಗ್ ಭೇಟಿ, ಸಿಎಂ ನಾಯಕತ್ವದ ಪರ-ವಿರುದ್ಧ ಹೇಳಿಕೆ ದಾಖಲು ಸಾಧ್ಯತೆ
ಹೈಲೈಟ್ಸ್:
- ರಾಜ್ಯ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಗುರುವಾರ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ
- ಅರುಣ್ ಸಿಂಗ್ ಭೇಟಿಗೆ ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಪ್ರತಿ ಶಾಸಕರಿಗೆ 5 ನಿಮಿಷ ಸಮಯ ನೀಡಲಾಗಿದೆ
- ನಾಲ್ಕು ಗೋಡೆಯ ಮಧ್ಯೆ ನಡೆಯುವ ಮಾತುಕತೆ ವಿವರವನ್ನು ಬಹಿರಂಗಗೊಳಿಸಬಾರದು ಎಂಬ ಷರತ್ತು ವಿಧಿಸಿ ಶಾಸಕರಿಗೆ ಭೇಟಿಗೆ ಅವಕಾಶ
ಬೆಂಗಳೂರು: ರಾಜ್ಯ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಗುರುವಾರ ಭೇಟಿಯಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಈ ಪೈಕಿ ಕೆಲವರು ನಾಯಕತ್ವದ ವಿರುದ್ಧ ಹೇಳಿಕೆ ನೀಡಿದವರು ಇದ್ದಾರೆ. ಹಾಗೆಯೇ ಸಿಎಂ ಬಿಎಸ್ವೈ ಪರ ನಿರಂತರ ಬ್ಯಾಟಿಂಗ್ ಮಾಡಿಕೊಂಡು ಬಂದವರೂ ಇದ್ದಾರೆ.
ಅರುಣ್ ಸಿಂಗ್ ಭೇಟಿಯಾಗಲು ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಶಾಸಕರು 5 ನಿಮಿಷ ಕಾಲ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಹೆಚ್ಚಿನ ಕಾಲಾವಕಾಶಕ್ಕೆ ಒತ್ತಡ ತಂದರೆ 10 ನಿಮಿಷ ನೀಡುವ ಸಾಧ್ಯತೆಯೂ ಇದೆ.
ಆದರೆ, ನಾಲ್ಕು ಗೋಡೆಯ ಮಧ್ಯೆ ನಡೆಯುವ ಮಾತುಕತೆ ವಿವರವನ್ನು ಬಹಿರಂಗಗೊಳಿಸಬಾರದು ಎಂಬ ಷರತ್ತು ವಿಧಿಸಿ ಈ ಶಾಸಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಬಸನಗೌಡ ಪಾಟೀಲ್ ಯತ್ನಾಳ್, ಎ.ಎಸ್.ಪಾಟೀಲ್ ನಡಹಳ್ಳಿ, ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಅಪ್ಪಚ್ಚು ರಂಜನ್, ರಾಜೂಗೌಡ, ಅಭಯ್ ಪಾಟೀಲ್, ಎಚ್ ವಿಶ್ವನಾಥ್, ಪ್ರೀತಂ ಗೌಡ, ರಾಜ್ಕುಮಾರ್ ಪಾಟೀಲ್ ತೇಲ್ಕೂರ್, ಸಿದ್ದು ಸವದಿ, ಬೆಳ್ಳಿ ಪ್ರಕಾಶ್, ವೈ.ಎ. ನಾರಾಯಣಸ್ವಾಮಿ, ಹರತಾಳು ಹಾಲಪ್ಪ, ಅರವಿಂದ ಬೆಲ್ಲದ್, ಸುನೀಲ್ ಕುಮಾರ್, ಉದಯ್ ಗುರಡಾಚಾರ್, ರೂಪಾಲಿ ನಾಯ್ಕ್, ಶಂಕರ ಪಾಟೀಲ ಮುನೇನಕೊಪ್ಪ, ಸೋಮಶೇಖರ್ ರೆಡ್ಡಿ, ಮಹೇಶ ಕುಮಠಳ್ಳಿ, ಸತೀಶ್ ರೆಡ್ಡಿ, ಪರಣ್ಣ ಮುನವಳ್ಳಿ, ಪ್ರದೀಪ್ ಶೆಟ್ಟರ್, ರಾಜೇಶ್ ಗೌಡ ಉಸ್ತುವಾರಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಗೊತ್ತಾಗಿದೆ.