ಅರುಣ್‌ ಸಿಂಗ್ ಸಾರಥ್ಯದ ಬಿಜೆಪಿ ಕೋರ್ ಕಮಿಟಿ ಸಭೆಗೆ ಕ್ಷಣಗಣನೆ: ಯಾರಿಗೆ ಚಾಟಿ..? ಯಾರಿಗೆ ಗಿಫ್ಟ್..?

ಹೈಲೈಟ್ಸ್‌:

  • ನಾಯಕತ್ವ ಬದಲಾವಣೆ ಕುರಿತಂತೆ ಸಭೆಯಲ್ಲಿ ಚರ್ಚೆ ಸಾಧ್ಯತೆ
  • ಬೆಲ್ಲದ್ ಫೋನ್ ಕದ್ದಾಲಿಕೆ ವಿಚಾರದ ಕುರಿತಾಗಿಯೂ ಮಾತುಕತೆ..?
  • ಸಂಪುಟ ಪುನಾರಚನೆ ಬಗ್ಗೆ ಸಭೆಯಲ್ಲಿ ನಿರ್ಧಾರವಾಗುತ್ತಾ..?

ಬೆಂಗಳೂರು: ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಫೋನ್ ಕದ್ದಾಲಿಕೆ ಆರೋಪ, ಎಚ್‌ ವಿಶ್ವನಾಥ್ ಹೇಳಿಕೆ ಈ ಎಲ್ಲಾ ವಿಚಾರಗಳು ಶುಕ್ರವಾರ ನಡೆಯಲಿರುವ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತಿಯಲ್ಲಿ ಶುಕ್ರವಾರ ಸಂಜೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಅರುಣ್ ಸಿಂಗ್, ಬುಧವಾರ ಸಚಿವರ ಜೊತೆಗೆ ಸಭೆ ನಡೆಸಿದ್ದರು. ಇದಾದ ಬಳಿಕ ಗುರುವಾರ 51 ಶಾಸಕರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು. ಈ ನಡುವೆ ವಿಧಾನಪರಿಷತ್ ಸದಸ್ಯ ಎಚ್‌ ವಿಶ್ವನಾಥ್ ನಾಯಕತ್ವ ಬದಲಾವಣೆ ಕುರಿತಾಗಿ ಬಹಿರಂಗವಾಗಿ ನೀಡಿರುವ ಹೇಳಿಕೆ ಹಾಗೂ ಸೂಚಿಸಿರುವ ಹೆಸರುಗಳು ಚರ್ಚೆಗೆ ಗ್ರಾಸವಾಗಿದ್ದವು. ಅರುಣ್ ಸಿಂಗ್ ಭೇಟಿಯ ಬೆನ್ನಲ್ಲೇ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಬಿಜೆಪಿಗೂ ಮುಜುಗರ ಉಂಟು ಮಾಡಿತ್ತು.

ಇದರ ಜೊತೆಗೆ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಫೋನ್ ಟ್ಯಾಪ್‌ ಆಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಈ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. ಸ್ವತಃ ಸ್ವಪಕ್ಷದ ಶಾಸಕ ಮಾಡಿರುವ ಆರೋಪ ಸರ್ಕಾರಕ್ಕೂ ಹಾಗೂ ಪಕ್ಷಕ್ಕೂ ಮುಜುಗರ ತಂದೊಡ್ಡಿದೆ. ಈ ವಿಚಾರ ಶುಕ್ರವಾರ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಅದಕ್ಕೂ ಮುನ್ನ ಅರುಣ್ ಸಿಂಗ್ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ, ಕೋವಿಡ್ ಸಂದರ್ಭದಲ್ಲಿ ಪಕ್ಷದ ಕೆಲಸ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಸಂಪುಟ ಪುನಾರಚನೆ ಚರ್ಚೆ?: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರು ಸಚಿವ ಸ್ಥಾನದ ಬೇಡಿಕೆಯನ್ನು ಇಟ್ಟಿದ್ದಾರೆ. ನಾನು ಹಿರಿಯ ಶಾಸಕ ಎಂಬ ಕಾರಣಕ್ಕಾಗಿ ಸಂಪುಟ ಪುನಾರಚನೆ ವೇಳೆ ನನ್ನನ್ನು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಅಲ್ಲದೆ ಎಂಪಿ ಕುಮಾರಸ್ವಾಮಿ ಕೂಡಾ ಅರುಣ್ ಸಿಂಗ್ ಅವರ ಬಳಿ ಸಂಪುಟದಲ್ಲಿ ಅವಕಾಶ ನೀಡುವ ಕುರಿತಾಗಿ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಎಲ್ಲ ವಿಚಾರಗಳು ಶುಕ್ರವಾರ ನಡೆಯಲಿರುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆ ಕುತೂಹಲದ ಕೇಂದ್ರವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *