Karnataka Weather Today: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

Karnataka Monsoon Rain: ಬೆಂಗಳೂರು(ಜೂ.18):  ಕರ್ನಾಟಕದಲ್ಲಿ ಮುಂಗಾರು ತೀವ್ರಗೊಂಡಿದ್ದು, ಮಲೆನಾಡು ಮತ್ತು ಕರಾವಳಿಯಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿಗರ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ್ದರೆ, ಇನ್ನೂ ಹಲವೆಡೆ ರಸ್ತೆಗಳು, ಸೇತುವೆಗಳು ಬಿರುಕು ಬಿಟ್ಟಿವೆ. ಮಹಾರಾಷ್ಟ್ರ ಗಡಿಗೆ ಹತ್ತಿರವಿರುವ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತವಾಗಿವೆ.

ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಕೃಷ್ಣಾ, ವೇದಗಂಗಾ, ದೂದ್​ಗಂಗಾ ಮತ್ತು ಹಿರಣ್ಯಕೇಶಿ ನದಿಗಳು ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿದೆ. ಕರದಂಗಾ-ಬೋಜ್​ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಜತ್ರತ್​-ಭಿವಶಿ ಸೇತುವೆ, ಸಂಕೇಶ್ವರ್​​-ನಾಗ್ನೂರ್​​​ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ನದಿಗೆ ಕಟ್ಟಲಾಗಿರುವ ಅಕೋಲ್​-ಸಿದ್ನಲ್​ ಸೇತುವೆಗಳು ಭಾರೀ ಮಳೆಗೆ ಸಂಪೂರ್ಣ ಮುಳುಗಿವೆ. ಹೀಗಾಗಿ ಸಂಪರ್ಕ ವ್ಯವಸ್ಥೆ ಕಡಿತಗೊಂಡಿದ್ದು, ಜನರು ಪರದಾಡುವಂತಾಗಿದೆ.

ಇನ್ನು, ಶಿವಮೊಗ್ಗದ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಹೀಗಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚಾಗಿದೆ. ಗುರುವಾರ ಬೆಳಗ್ಗೆಯಿಂದ ತುಂಗಾ ಜಲಾಶಯಕ್ಕೆ ಹರಿವಿನ ಪ್ರಮಾಣ ಹೆಚ್ಚಾಗಿ. ನಿನ್ನೆ ಬೆಳಗ್ಗೆ ಒಳಹರಿವಿನ ಮಟ್ಟ 20 ಸಾವಿರ ಕ್ಯೂಸೆಕ್ಸ್​ಗೆ ಹೆಚ್ಚಾಗಿದ್ದರೆ, 11 ಗಂಟೆಯೊಳಗೆ 25 ಸಾವಿರ ದಾಟಿತ್ತು. ಬಳಿಕ ಮಧ್ಯಾಹ್ನ 1 ಗಂಟೆಯೊಳಗೆ 33,700 ಕ್ಯೂಸೆಕ್ಸ್​ ಆಗಿತ್ತು.

ಇನ್ನು, ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾರವರಣವಿತ್ತು. ಕಳೆದ ಕೆಲ ಗಂಟೆಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕುಂದಾಪುರದಲ್ಲಿ ಇಂದು ಸಂಜೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ಮೂರು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬೀಸಲಿದೆ.

ಹಾಸನ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಿಂದ ಸತತ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಿದ್ದಯ್ಯನಗರ ಮತ್ತು ಬೀರನಹಳ್ಳಿ ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು.ಮಲೆನಾಡಿನ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಭೂಕುಸಿತವಾಗುವ ಭಯದಿಂದ ಜನರು ತಾವಿದ್ದ ಮನೆಗಳನ್ನು ತೊರೆದು ಬೇರೆಡೆಗೆ ತೆರಳಿದ್ದಾರೆ. ಕಳೆದ 2 ವರ್ಷಗಳಿಂದ ಇಲ್ಲಿ ಭೂ ಕುಸಿತವಾಗುತ್ತಿದ್ದು, ಹಲವು ಜನರು ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆ, ತಾಳಗುಪ್ಪ ಮತ್ತು ಹುಂಚದಕಟ್ಟೆಗಳಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಜಯಪುರ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿಕ್ಕಮಗಳೂರಿನ ಮಲೆನಾಡಲ್ಲಿ ಕಳೆದ 20 ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿತ್ತು. ಆದರೆ, ಮೊನ್ನೆ ರಾತ್ರಿಯಿಂದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ, ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೆಹೊನ್ನೂರು, ಬಣಕಲ್ ಭಾಗದಲ್ಲಿ ಸುರಿಯುತ್ತಿರೋ ರಣಮಳೆ, ಬೀಸುತ್ತಿರುವ ಭಾರೀ ಗಾಳಿಗೆ ಜನ ಭಯಭೀತರಾಗಿದ್ದಾರೆ. ಇಷ್ಟು ದಿನ ಮಳೆಗಾಗಿ ಆಕಾಶ ನೋಡ್ತಿದ್ದ ಮಲೆನಾಡಿಗರು ಈಗ ಆತಂಕದಲ್ಲಿ ಬದುಕುವಂತಾಗಿದೆ.

ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈಗಾಗಲೇ ಜಲಾಶಯಗಳಿಗೆ ಭಾರೀ ನೀರು ಹರಿದುಬರುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಆಗಿರುವುದರಿಂದ ನಾಲ್ಕೈದು ದಿನ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಳೆಯ ಆರ್ಭಟದಿಂದ ಜಲಪಾತಗಳಿಗೆ ಮರುಜೀವ ಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *