Petrol Price Today: ಬೆಂಗಳೂರಿನಲ್ಲಿ ಸೆಂಚುರಿ ಭಾರಿಸಿದ ಪೆಟ್ರೋಲ್ ದರ!
Petrol Price Today: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ನೂರರ ಗಡಿದಾಟಿದೆ. ಇಂದು ಬೆಳಗ್ಗೆಯಿಂದ ಪೆಟ್ರೋಲ್ ದರ ಏರಿಕೆಯಾಗಿದ್ದು ನಗರದ ಬಂಕ್ ಗಳಲ್ಲಿ ಪೆಟ್ರೋಲ್ ದರ 100 ದಾಟಿ ಮುನ್ನುಗಿದೆ.
ನಗರದ ಭಾರತ್ ಪೆಟ್ರೋಲಿಯಂ ಬಂಕ್ ನಲ್ಲಿ 100ರೂ 25 ಪೈಸೆ, ಇಂಡಿಯನ್ ಆಯಿಲ್ ಬಂಕ್ ಗಳಲ್ಲಿ ಪೆಟ್ರೋಲ್ 100 ರೂಪಾಯಿ 17 ಪೈಸೆ ಏರಿಕೆಯಾಗಿದೆ. ಡಿಸೇಲ್ ದರ 92 ರೂಪಾಯಿ 97 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲದೇ ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ದರ ಈಗಾಗಲೇ ನೂರರ ಗಡಿದಾಟಿದೆ. ಬೆಂಗಳೂರಿನ ಕಳೆದ ಒಂದು ವಾರದಿಂದ 99 ರೂಪಾಯಿ ಆಸುಪಾಸಿನಲ್ಲಿದ್ದ ಪೆಟ್ರೋಲ್ ದರ ಇಂದು ಬೆಳಗ್ಗೆ 100 ರೂಪಾಯಿ ದಾಟಿದೆ.
ಇನ್ನೂ ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಏರಿಕೆ ಆಗುತ್ತಿರೋದ್ರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಸುಮಾರು 40 ಕ್ಕು ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಏರಿಕೆ ಆಗಿದ್ದು ವಾಹನ ಸವಾರರ ಕಣ್ಣು ಕೆಂಪಗಾಗಿಸಿದೆ. ಪೆಟ್ರೋಲ್ ದರ ಏರಿಕೆಯಿಂದ ಮಧ್ಯಮ ವರ್ಗದ ಜನರ ಮೇಲೆ ಬಾರಿ ಪೆಟ್ಟು ಬೀಳಲಿದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸಿದರು.
ಪ್ರತಿದಿನ ಕೂಲಿ ಕೆಲಸಕ್ಕಾಗಿ ನಗರದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೈಕ್ ಗಳಲ್ಲಿ ಓಡಾಡುತ್ತಿದ್ದೇವೆ. ಆದ್ರೆ ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ದರ ಏರಿಕೆ ಆಗ್ತಿದ್ದು ಒಂದು ದಿನಕ್ಕೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರು ಸಾಕಾಗುತ್ತಿಲ್ಲ. ವಿಲ್ಸನ್ ಗಾರ್ಡನ್ ಮನೆಯಿಂದ ಯಶವಂತಪುರದಲ್ಲಿ ಕೆಲಸ ಮಾಡಲು ಹೋಗಬೇಕು ದಿನ ಕನಿಷ್ಠ 60 ರೂಪಾಯಿ ಪೆಟ್ರೋಲ್ ಬೇಕು. ದಿನ ಕೂಲಿ 500 ರೂಪಾಯಿ ಕೊಡ್ತಾರೆ ಅದರಲ್ಲಿ ಮನೆ ಖರ್ಚು ವೆಚ್ಚ, ಬಾಡಿಗೆ, ಮಕ್ಕಳು, ಪೆಟ್ರೋಲ್ ಸೇರಿ ಎಲ್ಲವೂ ಹೊಂದಾಣಿಕೆ ಮಾಡಬೇಕು. ಅದ್ರೆ ಪೆಟ್ರೋಲ್ ದರ ದಿನ ಹೀಗೆ ಏರಿಕೆ ಆಗ್ತಿದ್ರೆ ಹೇಗೆ ನಾವು ಬದುಕುವುದು ಎಂದು ಗಾರೆ ಕೆಲಸ ಮಾಡುವ ವ್ಯಕ್ತಿ ತಮ್ಮ ಅಳಲು ವ್ಯಕ್ತಪಡಿಸಿದರು.
ಇನ್ನು ಕೊರೊನಾ ಮಾಹಾಮಾರಿ ಅಬ್ಬರದಲ್ಲಿ ಕೆಲಸಗಳು ಕಡಿತವಾಗಿದೆ. ಸಂಬಳ ಸಹ ಸರಿಯಾಗಿ ಸಿಗುತ್ತಿಲ್ಲ. ಬೈಕ್ ಇದ್ರೆ ಎಲ್ಲೊ ಒಂದು ಕಡೆ ಓಡಾಡಿ ಏನಾದರೂ ಕೆಲಸ ಮಾಡಬಹುದು. ಅದ್ರೆ ಈಗ ಪೆಟ್ರೋಲ್ ದರ ಗಗನಕ್ಕೇರುತ್ತಿದ್ದು ನಮ್ಮಂತಹ ಮಧ್ಯಮವರ್ಗದ ಜನರ ಕಷ್ಟ ಕೇಳೋವವರು ಯಾರು ಅನ್ನೋದು ಪೆಟ್ರೋಲ್ ಬಂಕ್ ಗಳಲ್ಲಿ ಸಾರ್ವಜನಿಕ ಮಾತು.
ಕಳೆದ ಎರಡು ತಿಂಗಳು ಲಾಕ್ ಡೌನ್ ಇದ್ದರಿಂದ ಕೆಲಸವಿಲ್ಲದೆ ಮನೆಯಲ್ಲಿ ಇದ್ದು ಈಗ ಕೆಲಸದತ್ತ ಮುಖ ಮಾಡಿದ್ದೇವೆ. ಅದ್ರೆ ಜೀವನ ತುಂಬ ಕಷ್ಟ ಅಗ್ತಿದೆ ಸರ್ಕಾರ ಬಡವರ ಬಗ್ಗೆ ಸ್ವಲ್ಪ ಗಮನಹರಿಸಬೇಕು ಅನ್ನೋದು ಸಾರ್ವಜನಿಕ ಅಭಿಪ್ರಾಯ.