ರಸ್ತೆ ಬದಿ ಕುಳಿತು ಆನ್‌ಲೈನ್ ಕ್ಲಾಸ್‌ ಹಾಜರಾದ ಯುವತಿ, ಮಳೆಗೆ ಕೊಡೆ ಹಿಡಿದು ಆಸರೆಯಾದ ತಂದೆ: ಸುಳ್ಯದಲ್ಲಿ ನೆಟ್‌ವರ್ಕ್‌ ಸಮಸ್ಯೆ ತೀವ್ರ

ಹೈಲೈಟ್ಸ್‌:

  • ಸುಳ್ಯದ ನೆಟ್‌ವರ್ಕ್‌ ಸಮಸ್ಯೆಗೆ ಮತ್ತೊಂದು ತಾಜಾ ಉದಾಹರಣೆ
  • ರಸ್ತೆ ಬದಿಯಲ್ಲಿ ಕುಳಿತು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾದ ವಿದ್ಯಾರ್ಥಿನಿ
  • ಜಡಿ ಮಳೆ ವೇಳೆ ಕೊಡೆ ಹಿಡಿದು ಮಗಳಿಗೆ ಸಾಥ್‌ ನೀಡಿದ ತಂದೆ

ಮಂಗಳೂರು: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇದಕ್ಕೆ ಪೂರಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಮೊಬೈಲ್ ನೆಟ್‌ವರ್ಕ್‌ನದ್ದೇ ಸಮಸ್ಯೆ. ಅಂತಹ ಸಮಸ್ಯೆ ರಾಜ್ಯ ಮೀನುಗಾರಿಕಾ ಸಚಿವ ಎಸ್. ಅಂಗಾರರ ಊರಲ್ಲಿ ಎಲ್ಲಿಲ್ಲದೇ ತಾಂಡವವಾಡುತ್ತಿದೆ.

ಯೆಸ್.ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗೆ ಗುಡ್ಡ ಬೆಟ್ಟ, ಮರ ಏರುವ ಸಾಹಸ ಮಾಡಲೇ ಬೇಕಾಗುತ್ತದೆ. ಹೌದು. ಸುಳ್ಯದ ಮೊಗ್ರ, ಬಳ್ಳಕ್ಕದಲ್ಲಿ ಬಾಲಕಿಯೊಬ್ಬಳು ಎಸ್‌ಎಸ್‌ಎಲ್‌ಸಿ ಆನ್‌ಲೈನ್ ತರಗತಿಗೆ ಹಾಜರಾಗಲು ಹರಸಾಹಸ ಪಡುತ್ತಿರುವ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.

ಸುರಿಯುತ್ತಿರುವ ಮಳೆಯ ನಡುವೆಯೇ ಬಾಲಕಿ ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಜಾಲಾಡುತ್ತಿದ್ದಾಳೆ. ತಂದೆ ಕೊಡೆ ಹಿಡಿದು ಮಗಳ ಆನ್‌ಲೈನ್ ಪಾಠಕ್ಕೆ ಸಾಥ್ ನೀಡುತ್ತಿದ್ದಾರೆ. ಇದು ಕೇವಲ ಬಳ್ಳಕ್ಕದ ಚಿತ್ರಣವಲ್ಲ, ಸುಳ್ಯ ಗ್ರಾಮೀಣ ಭಾಗಗಳಲ್ಲಿ ಯಾವಾಗಲೂ ನೆಟ್‌ವರ್ಕ್‌ನಲ್ಲೇ ತೊಂದರೆ. ಇದು ಹಳ್ಳಿ ಪ್ರದೇಶವಾದ್ದರಿಂದ ಖಾಸಗಿ ಕಂಪನಿಗಳ ನೆಟ್‌ವರ್ಕ್ ಕಡಿಮೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಯಾವಾಗಲೂ ನೆಟ್‌ವರ್ಕ್ ಸಮಸ್ಯೆ ತಪ್ಪಿದ್ದಿಲ್ಲ. ಮನೆಯಲ್ಲಿದ್ದರೆ ನೆಟ್‌ವರ್ಕ್ ಇಲ್ಲ. ನೆಟ್ ವರ್ಕ್ ಅಲ್ಪಸ್ವಲ್ಪ ಸಿಗಬೇಕಾದರೆ ಮನೆಯಿಂದ ಹೊರಗೆ ಬರಲೇ ಬೇಕು. ಮೊಬೈಲ್ ಟವರ್‌ಗೆ ಕೆಲವೊಮ್ಮೆ ಸಮಸ್ಯೆ, ಕರೆಂಟ್ ಕೈಕೊಟ್ಟರೆ ಜನರೇಟರ್ ಸಮಸ್ಯೆ ಹೀಗೆ ಸಮಸ್ಯೆಗಳ ಸುಳಿಯಲ್ಲಿ ಬಿಎಸ್‌ಎನ್‌ಎಲ್ ಸಿಲುಕಿದ್ದರೆ, ನೆಟ್‌ವರ್ಕ್ ವಿಚಾರದಲ್ಲಿ ಜನತೆಯನ್ನು ಹೈರಾಣು ಮಾಡುತ್ತಿದೆ.

ಜನಪ್ರತಿನಿಧಿಗಳು ಸಭೆ ನಡೆಸಿ ಬಿಎಸ್‌ಎನ್ಎಲ್ ಅಧಿಕಾರಿಗಳಿಗೆ ಸಮಸ್ಯೆ ನಿವಾರಿಸುವಂತೆ ಸೂಚಿಸುತ್ತಾರೆ. ಸಭೆಯಿಂದ ಹೊರಗೆ ಹೋದ ಬಳಿಕ ಜನಪ್ರತಿನಿಧಿಗಳ ಸೂಚನೆಯೂ ವ್ಯಾಪ್ತಿ ಪ್ರದೇಶದ ಹೊರಗೆ ಇರುತ್ತದೆ. ಇನ್ನು ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *