ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ವಿಜಯೇಂದ್ರ ದೇವರ ದರ್ಶನ ಪಡೆದಿರುವುದು ಸಾಬೀತು :ಕಾನೂನು ಕ್ರಮ ಜರುಗಿಸಲು ಹೈಕೋರ್ಟ್ ಸೂಚನೆ!
ಹೈಲೈಟ್ಸ್:
- ಬಿವೈ ವಿಜಯೇಂದ್ರ ನಂಜನಗೂಡು ದೇವಸ್ಥಾನ ಪ್ರವೇಶ ಪ್ರಕರಣ
- ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ದೇವರ ದರ್ಶನ ಪಡೆದಿರುವುದು ಸಾಬೀತು
- ಕಾನೂನು ಕ್ರಮ ಜರುಗಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ನಂಜನಗೂಡು ದೇವಾಲಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ದೇವರ ದರ್ಶನ ಪಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು-ನಿಟ್ಟಾಗಿ ಜಾರಿ ಮಾಡಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆ ನೀಡಿತು. ವಿಜಯೇಂದ್ರ ಅವರು ಮೇ 18ರಂದು ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಪ್ರಕರಣದ ಕುರಿತು ಜಿಲ್ಲಾಧಿಕಾರಿ ನಡೆಸಿರುವ ಪ್ರಾಥಮಿಕ ತನಿಖಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಯಿತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ”ವಿಜಯೇಂದ್ರ ಅವರು ನಂಜನಗೂಡು ದೇವಸ್ಥಾನ ಪ್ರವೇಶಿಸಿದ್ದು ನಿಜ. ಆದರೆ, ವಿಶೇಷ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ.
ವಿಜಯೇಂದ್ರ ಉದ್ದೇಶಪೂರ್ವಕವಾಗಿ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿ, ಕೇವಲ ಐದು ಹತ್ತು ನಿಮಿಷವಷ್ಟೇ ದೇವಸ್ಥಾನದೊಳಗಿದ್ದರು” ಎಂದು ಸ್ಪಷ್ಟನೆ ನೀಡಿದರು. ಆದರೆ, ನ್ಯಾಯಪೀಠ ಇದಕ್ಕೆ ಆಕ್ಷೇಪವೆತ್ತಿತು.