Dharwad Rain: ಧಾರವಾಡದಲ್ಲಿ ಧಾರಾಕಾರ ಮಳೆ; ಕೆರೆ ಒಡೆದು ಸಾವಿರಾರು ಎಕರೆ ಜಲಾವೃತ

ಹುಬ್ಬಳ್ಳಿ (ಜೂನ್ 19): ಅರೆ ಮಲೆನಾಡು ಪ್ರದೇಶ ಎನಿಸಿಕೊಂಡ ಧಾರವಾಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ.  ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಲಾರಂಭಿಸಿವೆ. ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಅವಾಂತರಗಳೂ ಸೃಷ್ಟಿಯಾಗಲಾರಂಭಿಸಿವೆ. ಮೊನ್ನೆಯಷ್ಟೇ ಹಳೆ ಹುಬ್ಬಳ್ಳಿ ಪ್ರದೇಶದ ವ್ಯಕ್ತಿಯೋರ್ವ ಕಸ ಹಾಕಲು ಹೋಗಿ ನಾಲೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ. ಇದೀಗ ಕೆರಗಳು ಒಡೆದು ಅವಾಂತರ ಸೃಷ್ಟಿಯಾಗಲಾರಂಭಿಸಿದೆ. ಭರ್ತಿಯಾದ ಕೆರೆಯೊಂದು ಒಡೆದು ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಧಾರಕಾರ ಮಳೆಯಿಂದ ಕೆರೆ ಕಟ್ಟೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ ಘಟನೆ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ. ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಬೆಳಗಳು ಸಂಪೂರ್ಣ ಜಲಾವೃತಗೊಂಡಿದೆ. ಭತ್ತ, ಸೋಯಾಬಿನ್, ಕಬ್ಬು, ಹತ್ತಿ, ಗೋವಿನಜೋಳ ಬೆಳೆಗಳು ಜಲಾವೃತಗೊಂಡಿವೆ. ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಹಲವಾರು ರೈತರು ಮುಂಗಾರು ಬಿತ್ತನೆ ಮಾಡಿದ್ದರು.

ಸೋಯಾಬಿನ್, ಹತ್ತಿ, ಹೆಸರು, ಗೋವಿನ ಜೋಳ ಇತ್ಯಾದಿಗಳು ಮೊಳಕೆಯ ಹಂತದಲ್ಲಿಯೇ ಜಲಾವೃತಗೊಂಡು ಅಪಾರ ಹಾನಿ ಸೃಷ್ಟಿಯಾಗುವಂತಾಗಿದೆ. ಇದರಿಂದಾಗಿ ಅನ್ನದಾತನಿಗೆ ದಿಕ್ಕು ತೋಚದಂತಾಗಿದೆ. ಆದರೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆಗಳು ತುಂಬಿ ಹರಿಯುತ್ತಿವೆ. ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟಕ್ಕೆ ಜನತೆ ತತ್ತರಗೊಳ್ಳುವಂತಾಗಿದೆ.

ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಮಳೆ ಮುಂದುವರಿದಿದೆ. ಹುಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಮಳೆ ಆಗುತ್ತಿದೆ. ಬೆಳಿಗ್ಗೆಯಿಂದಲೂ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಜಿಟಿ ಜಿಟಿಯಾಗಿ, ಕೆಲವೊಮ್ಮೆ ಧಾರಾಕಾರ ಸ್ವರೂಪವಾಗಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಹುಬ್ಬಳ್ಳಿ ತಾಲೂಕಿನ ಹಲವು ಕೆರೆಗಳೂ ಭರ್ತಿಯಾಗಲಾರಂಭಿಸಿವೆ. ಅಂತರ್ಜಲ ಮಟ್ಟವೂ ಹೆಚ್ಚಳವಾಗಲು ಮಳೆ ಅನುಕೂಲವಾಗಿದೆ.

ತುಂಬಿ ಕೋಡಿ ಹರಿದ ಉಣಕಲ್ ಕೆರೆ:ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಯ ಉಣಕಲ್ ಕೆರೆ ಭರ್ತಿಯಾಗಿದೆ. ಉಣಕಲ್ ಕೆರೆ ಭರ್ತಿಯಾಗಿ ಕೋಡಿಯಾಗಿ ಹರಿಯುತ್ತಿದೆ. ಧಾರವಾಡ ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಉಣಕಲ್ ಕೆರೆಯೂ ಒಂದಾಗಿದೆ. ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ಅಂತರ್ಜಲದ ಜೀವನಾಡಿಯಾಗಿರೊ ಉಣಕಲ್ ಕೆರೆ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕೋಡಿಯಾಗಿ ಮೈದುಂಬಿ ಹರಿಯುತ್ತಿದೆ. ಕೆರೆ ಕೋಡಿಯ ದೃಶ್ಯಗಳು ಮನೋಹರವಾಗಿದ್ದು, ನೀರು ಹರಿಯೋದನ್ನು ಕಣ್ತುಂಬಿಕೊಳ್ತಿರೋ ಜನತೆ ಕೆರೆಯ ಕಡೆ ಮುಖ ಮಾಡಿದೆ. ಮುಂಗಾರು ಮಳೆ ಆರಂಭಗೊಂಡ ಕೆಲವೇ ದಿನಗಳಲ್ಲಿ ಉಣಕಲ್ ಕೆರೆ ಭರ್ತಿಯಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಕರ್ನಾಟಕದಾದ್ಯಂತ ಇಂದು ಹಲವೆಡೆ ಭಾರೀ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಇಂದು ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲೂ ಇಂದು ಮಳೆ ಹೆಚ್ಚಾಗುವ ಸಾಧ್ಯತೆಯಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *