Karnataka Rain Updates: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ; ಯಾದಗಿರಿ ಜಿಲ್ಲೆಯ 9 ಗ್ರಾಮಗಳಿಗೆ ಕೃಷ್ಣಾ ಪ್ರವಾಹ ಭೀತಿ…!

ಯಾದಗಿರಿ(ಜೂ.19): ಮಹಾರಾಷ್ಟ್ರದಲ್ಲಿ ಈಗಾಗಲೇ ಮಹಾಮಳೆ ಅಬ್ಬರಿಸುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ನದಿಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಅರ್ಭಟದಿಂದ ಯಾದಗಿರಿ ‌ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ‌ಎದುರಿಸಲು ಸನ್ನದ್ದವಾಗಿದೆ.  ಪ್ರತಿ ವರ್ಷ ಕೃಷ್ಣಾ ಹಾಗೂ ಭೀಮಾ ನದಿ ಅಬ್ಬರಕ್ಕೆ ಯಾದಗಿರಿ ಜಿಲ್ಲೆಯು ಪ್ರವಾಹಕ್ಕೆ ನಲುಗಿ ಹೋಗುತ್ತದೆ. ಕಳೆದ ವರ್ಷ ಕೂಡ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಯಾಗಿತ್ತು. ಈಗ ಮತ್ತೆ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆ ಬರುತ್ತಿರುವ ಹಿನ್ನೆಲೆ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಲ್ಲಿ ಇಂದು 19.562 ಟಿಎಂಸಿ ನೀರು ಸಂಗ್ರಹವಿದೆ. 33.33 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 19.562 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 606 ಕ್ಯೂಸೆಕ್ ನೀರು ಒಳಹರಿವು ಇದ್ದು,107 ಕ್ಯೂಸೆಕ್ ನೀರು ಹೊರ ಹರಿವಿದೆ.

9 ಗ್ರಾಮಗಳ ಸ್ಥಳಾಂತರ ಮಾಡಲು ಮುಂದಾದ ಜಿಲ್ಲಾಡಳಿತ

ಕೃಷ್ಣಾ ನದಿ ಪ್ರವಾಹ ಭೀತಿಯನ್ನು 9 ಗ್ರಾಮಗಳು ಎದುರಿಸಲಿವೆ. ಯಾದಗಿರಿ ಜಿಲ್ಲೆಯ ನೀಲಕಂಠರಾಯನಗಡ್ಡಿ, ಕರ್ನಾಳ, ಗೋಂದೆನೂರು, ಯಕ್ಷಿಂತಿ, ಗೌಡೂರು ಸೇರಿದಂತೆ 9 ಗ್ರಾಮಗಳು ಪ್ರವಾಹ ಭೀತಿ ಎದುರಿಸಲಿವೆ. ಈಗಾಗಲೇ ಜಿಲ್ಲಾಡಳಿತ ಪ್ರವಾಹ ಭೀತಿ ಎದುರಿಸುವ ಗ್ರಾಮಗಳ ಸ್ಥಳಾಂತರ ಮಾಡಲು ಮುಂದಾಗಿದೆ. ಖುದ್ದು ಕಂದಾಯ ಸಚಿವರಿಗೆ ಸ್ಥಳಾಂತರ ಮಾಡಲು ‌ಪತ್ರ ಬರೆಯಲಾಗಿದೆ. ಸರಕಾರ ಅನುಮೋದನೆ ನೀಡಿದ ನಂತರ ಗ್ರಾಮಗಳ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಮಾತನಾಡಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ 9 ಗ್ರಾಮಗಳ ಸ್ಥಳಾಂತರ ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರ ಅನುಮೊದನೆ ನೀಡಿದ ನಂತರ ಗ್ರಾಮಗಳ ಸ್ಥಳಾಂತರ ಮಾಡಲಾಗುತ್ತದೆ ಎಂದರು.

ಅಧಿಕಾರಿಗಳ ಮಾಕ್ ಡ್ರಿಲ್ಒಂದು ವೇಳೆ ಪ್ರವಾಹ ಬಂದರೆ ಯಾವ ರೀತಿ ಪ್ರವಾಹ ಪರಿಸ್ಥಿತಿ ಎದುರಿಸಬೇಕು. ಪ್ರವಾಹದಲ್ಲಿ ಯಾರಾದರೂ ಸಿಲುಕಿದರೆ ಹೇಗೆ ಅವರನ್ನು ಬೋಟ್ ಮೂಲಕ ರಕ್ಷಣೆ ಮಾಡಬೇಕೆಂಬ ಬಗ್ಗೆ ಮಾಕ್ ಡ್ರಿಲ್​​ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಚಗುಂಡಾಳ ಗ್ರಾಮದ ಕೆರೆಯಲ್ಲಿ ಅಗ್ನಿಶಾಮಕದಳದ ಅಧಿಕಾರಿ ಪ್ರಮೋದ್ ವಾಲಿ, ಸಿಪಿಐ ಎಸ್. ಎಂ.ಪಾಟೀಲ ಅವರ ನೇತೃತ್ವದಲ್ಲಿ ‌ಮಾಕ್ ಡ್ರಿಲ್​​ ಮಾಡಲಾಗಿದೆ.

ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸಹಾಯವಾಣಿ ಕೇಂದ್ರ ಆರಂಭ ಮಾಡಿದೆ. ಇನ್ನೂ 10 ರಿಂದ 15 ದಿನದೊಳಗೆ ಪ್ರವಾಹ ಎದುರಾಗುವ ಆತಂಕವಿದೆ. ಜಿಲ್ಲಾಡಳಿತ ಸುರಪುರ, ಶಹಾಪುರ, ವಡಗೇರಾ ಮೊದಲಾದ ಭಾಗದ ಕೃಷ್ಣಾ ನದಿ ತೀರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗ ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದು ಯಾವುದೇ ಆತಂಕವಿಲ್ಲ. ಆದರೆ, ಮಹಾರಾಷ್ಟ್ರದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದರೆ ಪ್ರವಾಹ ಎದುರಿಸುವ ಆತಂಕವಿದೆ. ಜನರು ಕೂಡ ಪ್ರವಾಹ ಬಗ್ಗೆ ಎಚ್ಚರಿಕೆ  ವಹಿಸುವುದು ಅಗತ್ಯವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *