ದಿಢೀರ್ ದೆಹಲಿಗೆ ಹಾರಿದ ಜಾರಕಿಹೊಳಿ, ರಾಜ್ಯ ರಾಜಕೀಯದಲ್ಲಿ ಗುಸುಗುಸು ಶುರು ..!
ಬೆಂಗಳೂರು,ಆ.3- ಆಗಸ್ಟ್ ಮಧ್ಯಭಾಗದಲ್ಲಿ ಸಂಪುಟ ಪುನರ್ ರಚನೆಯ ಮಾತುಗಳು ಕೇಳಿಬರುತ್ತಿರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ನವದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ.
ಉಪ ಮುಖ್ಯಮಂತ್ರಿ ಲಕ್ಷ್ಣಣ್ ಸವದಿ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಜಾರಕಿಹೊಳಿ ಇದೀಗ ನವದೆಹಲಿಗೆ ತೆರಳುತ್ತಿರುವುದು ಸಾಕಷ್ಟು ಕುತೂಹಲ ಕೆರಳಸಿದೆ.
ಎರಡು ದಿನಗಳ ನವದೆಹಲಿ ಭೇಟಿ ವೇಳೆಯಲ್ಲಿ ಲಕ್ಷ್ಣಣ್ ಸವದಿಯನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವಂತೆ ಹಾಗೂ ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಲಾಬಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ಜುಲೈ ಆರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದಾಗ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ನವದೆಹಲಿಯ ಭೇಟಿ ವೇಳೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಗಜೇಂದ್ರ ಸಿಂಗ್ ಶೇಖಾವತ್, ಸುರೇಶ್ ಅಂಗಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅರಣ್ಯ, ರೈಲ್ವೆ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳನ್ನು ಭೇಟಿಯಾಗಲು ಜಾರಕಿಹೊಳಿ ಯೋಜನೆ ಹಾಕಿಕೊಂಡಿದ್ದಾರೆ.
ಮಂಗಳವಾರ ಜೆಪಿ ನಡ್ಡಾ ಅವರನ್ನು ಜಾರಕಿಹೊಳಿ ಭೇಟಿಯಾಗಲಿದ್ದಾರೆ. ದೊಡ್ಡ ಹೊಣೆಗಾರಿಕೆಗಾಗಿ ಅವರನ್ನು ನವದೆಹಲಿಯ ಪಕ್ಷದ ಕೇಂದ್ರ ನಾಯಕತ್ವದಿಂದ ಕರೆಯಲಾಗಿದೆ ಎಂಬುದು ಸಚಿವರ ಆಪ್ತ ಮೂಲಗಳು ಹೇಳುತ್ತಿವೆ.
ಜಾರಕಿಹೊಳಿ ಬಣದ ಪ್ರಕಾರ, ಬೆಳಗಾವಿ ಲಿಂಗಾಯಿತರಾದ ಲಕ್ಷ್ಮಣ್ ಸವದಿ ಮತ್ತು ಶಶಿಕಲಾ ಜೊಲ್ಲೆ ಅವರನ್ನು ಸಂಪುಟದಿಂದ ಕೈ ಬಿಟ್ಟು, ಉಮೇಶ್ ಕತ್ತಿ, ಪೂರ್ಣಿಮಾ ಕೆ ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಎದುರು ನೋಡುತ್ತಿದ್ದಾರೆ.
ಶಶಿಕಲಾ ಜೊಲ್ಲೆ ಕೂಡಾ ಕಳೆದ ವಾರ ದೆಹಲಿಗೆ ಭೇಟಿ ನೀಡಿ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ತೊರೆದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಕೇಂದ್ರ ನಾಯಕತ್ವದಿಂದ ಭರವಸೆ ನೀಡಲಾಗಿತ್ತು.
ಅದನ್ನು ಕೇಂದ್ರ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶ ಜಾರಕಿಹೊಳಿಯದ್ದಾಗಿದೆ. ಆದಾಗ್ಯೂ, ಅದು ಬೇಡಿಯಲ್ಲ ಎಂದು ಅವರು ಹೇಳಿದ್ದಾರೆ.
ಕಾರಜೋಳ ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದು, ಜಾರಕಿಹೊಳಿಗಾಗಿ ಲಕ್ಷ್ಣಣ್ ಸವದಿಯನ್ನು ಬದಲಾಯಿಸುವ ಸಾಧ್ಯತೆ ಇಲ್ಲ, ಶ್ರೀರಾಮುಲು ಬೆಂಬಲಿಗರು ಕೂಡಾ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.