Karnataka Politics: ಬಿಜೆಪಿ ಬಳಿಕ ಕಾಂಗ್ರೆಸಿನಲ್ಲೂ ನಾಯಕತ್ವದ ವಿವಾದ ಶುರು; ದೆಹಲಿಗೆ ದೌಡಾಯಿಸಿದ ಡಿ.ಕೆ. ಶಿವಕುಮಾರ್
ನವದೆಹಲಿ(ಜೂ. 20): ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ತೀವ್ರವಾಗಿ ಚರ್ಚೆ ಆಗುತ್ತಿರುವ ವೇಳೆಯಲ್ಲೇ ಕಾಂಗ್ರೆಸ್ ಪಕ್ಷದಲ್ಲೂ ಅಂತದೇ ಅತಃಕಲಹ ಶುರುವಾಗಿದೆ. ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಎದ್ದಿರುವ ಕೂಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ವಿಚಲಿತರನ್ನಾಗಿಸಿದೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಶುರುವಾಗಿರುವ ‘ನಾಯಕತ್ವದ ವಿವಾದ’ದ ಚೆಂಡು ಈಗ ಹೈಕಮಾಂಡ್ ಅಂಗಳವನ್ನೂ ತಲುಪುತ್ತಿದೆ.
ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ದೆಹಲಿಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದ್ದಕ್ಕಿದ್ದಂತೆ ಪ್ರಸ್ತಾಪ ಆಗುತ್ತಿರುವ ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ವಿಷಯದ ಬಗ್ಗೆ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿ ಅವರಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗಳನ್ನು ಎದುರಿಸುವುದು. ಚುನಾವಣೆಗೂ ಮುನ್ನ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಪದೇ ಪದೇ ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂಬ ವಿಷಯ ಪ್ರಸ್ತಾಪಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆ ವೇಳೆ ಪ್ರಸ್ತಾಪಿಸಲಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ಬೆಂಬಲಿಗ ಶಾಸಕ ಜಮೀರ್ ಅಹಮದ್ ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂದಿದ್ದಾರೆ. ತಮ್ಮ ಬೆಂಬಲಿಗರ ಬಹುಪರಾಕ್ ಕೇಳಿ ಕೂಡ ಸಿದ್ದರಾಮಯ್ಯ ಸುಮ್ಮನಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅವರು ತಾವೇ ಮುಖ್ಯಮಂತ್ರಿ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರು ನೀಡುವ ಸಾಧ್ಯತೆ ಇದೆ.
ಸಾಮೂಹಿಕ ನಾಯಕತ್ವ ಬದಿಗೊತ್ತಿ ಸಿದ್ದರಾಮಯ್ಯ ನಾಯಕತ್ವ ಕುರಿತು ಮಾತನಾಡುತ್ತಿರುವ ಈ ಶಾಸಕ ಮೀರ್ ಅಹಮದ್ ಅವರಿಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ ಬಳಿಕವೂ ತಾವು ಹೇಳಿಕೆ ಕೊಟ್ಟದ್ದನ್ನು ಜಮೀರ್ ಅಹಮದ್ ಸಮರ್ಥಿಸಿಕೊಂಡಿದ್ದಾರೆ. ಹಿಂದೆ ಹಿರಿಯ ನಾಯಕರೂ ಮುತ್ಸದಿಗಳೂ ಆದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು. ಎಲ್ಲರೂ ಸೇರಿ ಪಕ್ಷದ ನೀತಿ ನಿಯಮಗಳ ಅನುಸಾರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಈ ವಿಷಯಗಳ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಯಾರ ಮಾತಿಗೂ ಮನ್ನಣೆ ನೀಡದೆ ‘ಸಿದ್ದರಾಮಯ್ಯ ಅವರೇಮುಂದಿನ ಮುಖ್ಯಮಂತ್ರಿ’ ಎಂದು ಹೇಳುವ ಮೂಲಕ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ದೂರು ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಪುನರ್ರಚನೆ ಮಾಡಲು ಅವಕಾಶ ನೀಡುವಂತೆ ಕೇಳಲಿದ್ದಾರೆ. ಕೆಪಿಸಿಸಿ ಪುನರ್ರಚನೆಗೆ ಅವಕಾಶ ಸಿಕ್ಕಿದರೆ ತಮ್ಮ ಬೆಂಬಲಿಗರಿಗೆ ಮಣೆ ಹಾಕಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ ಎನ್ನಲಾಗುತ್ತಿದೆ.