BS Yediyurappa: ಬಗೆಹರಿಯದ ಬಿಜೆಪಿ ರಾಜಕೀಯ ಬಿಕ್ಕಟ್ಟು; ಮುಂದಿನವಾರ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ಸಾಧ್ಯತೆ

ನವದೆಹಲಿ, ಜೂ. 20: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗಿದ್ದು ಇದೇ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಬಂದುಹೋದರು. ಆದರೆ ಬಿಕ್ಕಟ್ಟು ಮಾತ್ರ ಬಗೆಹರಿದಿಲ್ಲ.‌ ಎಲ್ಲಾ ಬೆಳವಣಿಗೆಗಳು ನಾಯಕತ್ವ ಬದಲಾವಣೆಯ ಸುತ್ತಲೇ ಆಗುತ್ತಿರುವುದರಿಂದ ಯಡಿಯೂರಪ್ಪ ಅವರನ್ನೇ ದೆಹಲಿಗೆ ಕರೆಸಿಕೊಂಡು ಸಮಸ್ಯೆ ಬಗೆಹರಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಯಡಿಯೂರಪ್ಪ ವಿರುದ್ಧ ಸೆಟೆದು ನಿಂತಿದ್ದ ಬಂಡಾಯ‌ ಶಾಸಕರು ರಾಜ್ಯಕ್ಕೆ ಉಸ್ತುವಾರಿ ಬಂದು ಹೋದ ಮೇಲೆ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಉಸ್ತುವಾರಿ ಅರುಣ್ ಸಿಂಗ್ ಅವರು ‘ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಅವರು ಕೊರೋನಾ ವೇಳೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ‘ನಾಯಕತ್ವ ಬದಲಾವಣೆ ಇಲ್ಲ’ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಅರುಣ್ ಸಿಂಗ್ ಬಗ್ಗೆಯೇ ಆಕ್ಷೇಪಗಳು ಕೇಳಿಬರುತ್ತಿದೆ. ಈ ಬಗ್ಗೆ ಹೈಕಮಾಂಡಿಗೂ ದೂರು ಹೋಗಿದ್ದು ಈಗ ಹೈಕಮಾಂಡ್ ನೇರವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಮುಂದಿನ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಯಡಿಯೂರಪ್ಪ ದೆಹಲಿ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಆಗಲಿದ್ದಾರೆ. ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆಯಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಬೆಳವಣಿಗೆ ಬಗ್ಗೆ ಹೈಕಮಾಂಡ್ ಒಂದು ಹಂತದ ಮಾಹಿತಿ ಸಂಗ್ರಹ ಮಾಡಿದೆ. ಇಂದು ಅಥವಾ ನಾಳೆ ಅರುಣ್ ಸಿಂಗ್ ವರದಿ ಕೂಡ ಸಲ್ಲಿಕೆ ಮಾಡಲಿದ್ದಾರೆ. ಎಲ್ಲವುಗಳನ್ನು ಪರಮಾರ್ಶಿಸಿ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಯಾವಾಗ ಬೇಕಾದರೂ ಯಡಿಯೂರಪ್ಪ ಅವರಿಗೆ ದೆಹಲಿ ನಾಯಕರಿಂದ ಫೋನ್ ಕರೆ ಬರುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರಿಂದ ನಾಯಕತ್ವ ಬದಲಾವಣೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡ ಅವರು ಸೇರಿಕೊಂಡು ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕಾ ಅಥವಾ ಅವರ ಅಧಿಕಾರವನ್ನು ಮೊಟಕುಗೊಳಿಸಬೇಕೋ ಎಂಬ ಬಗ್ಗೆ ಕೂಡ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೆಹಲಿ ಯಾತ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಪಾಲಿಗೆ ಬಹಳ ನಿರ್ಣಾಯಕವಾದುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *