ಇಡೀ ವಿಶ್ವವೇ ಇಂದು ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಯೋಗ ಭರವಸೆಯ ಆಶಾಕಿರಣವಾಗಿದೆ: ಪ್ರಧಾನಿ ಮೋದಿ

ಹೈಲೈಟ್ಸ್‌:

  • ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
  • ಪ್ರಧಾನಿ ಮೋದಿಯಿಂದ ಯೋಗ ದಿನದ ಸಂದೇಶ ಭಾಷಣ
  • ಯೋಗ ನಮ್ಮ ಜೀವನದ ಭರವಸೆಯ ಆಶಾಕಿರಣ ಎಂದ ಮೋದಿ

ಹೊಸದಿಲ್ಲಿ: ಇಂದು ಇಡೀ ವಿಶ್ವವೇ ಕೋವಿಡ್-19 ಮಹಾಮಾರಿ ಸಾಂಕ್ರಾಮಿಕ ವಿರುದ್ಧ ಹೋರಾಡುತ್ತಿದೆ. ಜಗತ್ತಿನಾದ್ಯಂತ 4 ದಶಲಕ್ಷಕ್ಕೂ ಹೆಚ್ಚು ಸಾವುಗಳು ಕೊರೊನಾದಿಂದ ಸಂಭವಿಸಿದೆ ಮತ್ತು 178 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಇಂತಹ ಸಂದರ್ಭದಲ್ಲಿ ಯೋಗ ನಿಜಕ್ಕೂ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗದ ಮಹತ್ವದ ಬಗ್ಗೆ ಕೊಂಡಾಡಿದ್ದಾರೆ.

ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿ ಅವರು, ಕಳೆದ ಎರಡು ವರ್ಷಗಳಿಂದ ಭಾರತ ಅಥವಾ ಬೇರೆ ರಾಷ್ಟ್ರಗಳಲ್ಲಿ ಕೊರೊನಾದಿಂದಾಗಿ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೆ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ ಕಡಿಮೆಯಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಕೊರೊನಾದ ಸಂದಿಗ್ನ ಪರಿಸ್ಥಿತಿ ಹಿನ್ನೆಲೆ ಈ ಬಾರಿಯ ಯೋಗ ಕಾರ್ಯಕ್ರಮ ಮನೆಯಲ್ಲೇ ಯೋಗ, ಕುಟುಂಬಸ್ಥರೊಂದಿಗೆ ಯೋಗ ಎಂಬುವುದಾಗಿದೆ. ಈ ಬಾರಿ ಸುಮಾರು 190 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬುದಾಗಿದೆ. ಇತ್ತೀಚಿನ ಪರಿಸ್ಥಿತಿ, ಆರೋಗ್ಯದ ಸ್ಥಿತಿಗತಿಯಿಂದಾಗಿ ಹೆಚ್ಚೆಚ್ಚು ಮಂದಿ ಯೋಗ ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಪ್ರತಿ ದೇಶಗಳು, ಪ್ರತಿ ಪ್ರದೇಶಗಳು, ಜನರು ಆರೋಗ್ಯಯುತವಾಗಿ ಬಾಳಲಿ ಎಂದು ನಾನು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಇಂದು ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಕೊರೋನಾ ಚಿಕಿತ್ಸೆಯ ಮಧ್ಯೆ ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ-ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡಿಸುತ್ತಿದ್ದಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ ಎಂದು ಪ್ರಧಾನಿ ಇಂದು ಹೇಳಿದರು.

ಇನ್ನು ಇದೆ ವೇಳೆ ಪ್ರಧಾನಿ ಮೋದಿ ಯೋಗಕ್ಕೆ ಸಂಬಂಧಪಟ್ಟ ಇ-ಯೋಗ ಅಪ್ಲಿಕೇಶನನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಅಪ್ಲಿಕೇಶನ್ ಲಭ್ಯವಿದ್ದು, ಇದು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದು ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯವಾಕ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *