ಕೊರೊನಾ ನಿಯಮ ಉಲ್ಲಂಘಿಸಿ ಪತ್ನಿ ಹುಟ್ಟುಹಬ್ಬ ಆಚರಿಸಿದ ಸಚಿವ ಸಿಪಿ ಯೋಗೇಶ್ವರ್: ಕ್ರಮಕ್ಕೆ ಜನರ ಒತ್ತಾಯ!
ಹೈಲೈಟ್ಸ್:
- ಕೊರೊನಾ ನಿಯಮ ಉಲ್ಲಂಘಿಸಿ ಪತ್ನಿ ಹುಟ್ಟುಹಬ್ಬ ಆಚರಣೆ
- ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಕ್ರಮಕ್ಕೆ ಜನರ ಆಗ್ರಹ
- ಮಹದೇಶ್ವರ ದೇವಾಲಯದ ಬಳಿ ಕಾರ್ಯಕ್ರಮ ಆಯೋಜನೆ
ಚನ್ನಪಟ್ಟಣ: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ಪತ್ನಿ ಜನ್ಮದಿನಾಚರಣೆಯಲ್ಲಿ ಕೊರೊನಾ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ತಾಲೂಕಿನ ಮಹದೇಶ್ವರ ದೇವಾಲಯದ ಬಳಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಧಿಕೊಳ್ಳದೇ ಕಾರ್ಯಕರ್ತರ ಪಡೆಯೊಂದಿಗೆ ಕೇಕ್ ಕತ್ತರಿಸಿದ್ದಾರೆ. ಸೋಂಕು ತಡೆ ಮಾರ್ಗಸೂಚಿ ಅನ್ವಯ ಯಾವುದೇ ಸಭೆ-ಸಮಾರಂಭಗಳಿಗೆ ಅನುಮತಿ ಇಲ್ಲ.
ಕ್ರಮ ಕೈಗೊಳ್ಳಲು ಆಗ್ರಹ!
ಸಚಿವರೇ ಮಾಸ್ಕ್ ಧರಿಸಿಲ್ಲ. ನಿಯಮ ಮೀರಿ ಜನರನ್ನು ಸೇರಿಸಿದ್ದಾರೆ. ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ. ಜನಸಾಮಾನ್ಯರು ಹೀಗೆ ಮಾಡಿದ್ದರೆ ಠಾಣೆಗೆ ಕರೆಸಿ ಬಸ್ಕಿ ಹೊಡೆಸುವುದು, ದಂಡ ವಿಧಿಸುವುದು ಮಾಡುತ್ತಿದ್ದ ಪೊಲೀಸರಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವೇ, ಸಚಿವರಿಗೆ ಪ್ರತ್ಯೇಕ ಕಾನೂನು ಇದೆಯೇ ಎಂದು ಪ್ರಶ್ನಿಸಿರುವ ಜನರು, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.