Free Vaccine: 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಇಂದಿನಿಂದ ಉಚಿತ ಕೊರೋನಾ ಲಸಿಕೆ; ಯೋಗ ದಿನಕ್ಕೆ ಮೋದಿ ಕೊಡುಗೆ

ನವದೆಹಲಿ (ಜೂನ್ 21): ಅಂತಾರಾಷ್ಟ್ರೀಯ ಯೋಗ ದಿನವಾದ ಇಂದಿನಿಂದ ಕೇಂದ್ರ ಸರ್ಕಾರದ ಭಾರತದಾದ್ಯಂತ ಹೊಸ ಕೊರೋನಾ ಲಸಿಕಾ ನೀತಿಯನ್ನು ಜಾರಿಗೆ ತಂದಿದೆ. ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೊರೋನಾ ಲಸಿಕಾ ನೀತಿಯನ್ನೇ (Covid Vaccine Policy) ಬದಲಾಯಿಸಲಾಗಿದ್ದು, ಇನ್ನು ಮುಂದೆ ಕೊರೋನಾ ಲಸಿಕೆ ಪಡೆಯಲು ಕೋವಿನ್ ಆ್ಯಪ್​ನಲ್ಲಿ (CoWin App) ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಕಡ್ಡಾಯವೇನಲ್ಲ ಎಂದು ಕೂಡ ಸರ್ಕಾರ ತಿಳಿಸಿದೆ.

ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ (Free Covid-19 Vaccine) ನೀಡಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಮೇಲಿದ್ದ ಲಸಿಕೆಯ ಖರ್ಚಿನ ಹೊರೆಯನ್ನು ಕೇಂದ್ರ ಸರ್ಕಾರ ಇಳಿಸಿದೆ. ಇಂದಿನಿಂದ ಯಾವ ರಾಜ್ಯ ಸರ್ಕಾರವೂ ಕೊರೋನಾ ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಮೊದಲು 45 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಅದು ಅನ್ವಯವಾಗಲಿದೆ.

 

ಇಂದಿನಿಂದ (ಜೂನ್ 21) 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಕೊರೋನಾ ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರಗಳು ಇನ್ನು ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಲಸಿಕಾ ಯೋಜನೆ ದೀಪಾವಳಿಯವರೆಗೂ ಮುಂದುವರೆಯಲಿದೆ. ಅಷ್ಟರೊಳಗೆ ದೇಶದಲ್ಲಿನ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಗಳನ್ನು ಹಾಕಲಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಲಸಿಕಾ ನೀತಿಯ ಪ್ರಕಾರ, ಭಾರತದ ಶೇ. 75ರಷ್ಟು ಜನರ ಕೊರೋನಾ ಲಸಿಕೆಗಳ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಲಸಿಕೆ ಉತ್ಪಾದನಾ ಸಂಸ್ಥೆಗಳು ಉತ್ಪಾದಿಸುವ ಶೇ. 75ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗಳನ್ನು ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗೆಂದು ಖಾಸಗಿ ಆಸ್ಪತ್ರೆಗಳಿಗೂ ಶೇ. 25ರಷ್ಟು ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗೆ 150 ರೂ.ಗಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಇದರಿಂದ ಎಲ್ಲ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಲಸಿಕೆ ಸಿಗಲಿದೆ.

7 ಕಂಪನಿಗಳಿಂದ ಲಸಿಕೆ ತಯಾರಿಕೆ:
ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಈಗ ದೇಶದಲ್ಲಿ ಏಳು ಕಂಪನಿ ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. 3 ಲಸಿಕೆ ಅಡ್ವಾನ್ಸ್ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ನಮ್ಮ ದೇಶದ ಜನರಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಬೇರೆ ದೇಶಗಳಿಂದಲೂ ಖರೀದಿಸಲಾಗುತ್ತಿದೆ. ಈಗಾಗಲೇ ಕೊರೋನಾ ಲಸಿಕೆ ಉತ್ಪಾದನೆ ಶೇ. 90ರಷ್ಟು ಹೆಚ್ಚಾಗಿದೆ. ಶೀಘ್ರದಲ್ಲೇ ಇನ್ನೆರಡು ಲಸಿಕೆಗಳು ಸಿಗಲಿವೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದ್ದು, ಇದನ್ನು ಮೂಗಿನ ಮೂಲಕ ಸ್ಪ್ರೇ ಮಾಡಲಾಗುತ್ತದೆ.

ಆನ್​ಲೈನ್ ರಿಜಿಸ್ಟ್ರೇಷನ್ ಕಡ್ಡಾಯವಲ್ಲ:
ಇದುವರೆಗೂ ಕೊರೋನಾ ಲಸಿಕೆ ಪಡೆಯಲು ಕೋವಿನ್ (CoWin)  ಆ್ಯಪ್​ನಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಲೇಬೇಕಾಗಿತ್ತು. ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರು ಎಲ್ಲರೂ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಕೊರೋನಾ ಲಸಿಕೆ ಪಡೆಯಬಹುದು. ಇದಕ್ಕೆ ಆನ್​ಲೈನ್ ಬುಕಿಂಗ್ ಅಥವಾ ಅಪಾಯಿಂಟ್​ಮೆಂಟ್ ಬೇಕೆಂಬುದು ಕಡ್ಡಾಯವಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *