Karnataka Weather Today: ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ; ಮಲೆನಾಡು, ಕರಾವಳಿಯಲ್ಲಿಂದು ಹಳದಿ ಅಲರ್ಟ್​ ಘೋಷಣೆ

Karnataka Rain: ಬೆಂಗಳೂರು (ಜೂನ್ 22): ಸತತವಾಗಿ ಒಂದು ವಾರಗಳ ಕಾಲ ಅಬ್ಬರಿಸಿದ್ದ ಮಳೆರಾಯ ಕಳೆದರೆಡು ದಿನಗಳಿಂದ ಕೊಂಚ ಬಿಡುವು ಪಡೆದಿದ್ದಾನೆ. ಆದರೂ, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಭಾಗಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ.

ಕರಾವಳಿ ತೀರದ ಜಿಲ್ಲೆಗಳಲ್ಲಿ ಸುಮಾರು 10 ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿತ್ತು. ಇದೀಗ 2 ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿ ನೀರಿನ ಹರಿವು ಹೆಚ್ಚಾಗಿ, ಪ್ರವಾಹದ ಭೀತಿ ಎದುರಾಗಿದೆ.

ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇಂದಿನಿಂದ ಕಡಿಮೆಯಾಗುವ ಸಾಧ್ಯತೆಯಿದೆ.

ಮಳೆಯಿಂದ ಕರ್ನಾಟಕದ 20 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಎಂ ಸೂಚನೆ ನೀಡಿದ್ದರು. ಇದೀಗ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ 1,710 ಗ್ರಾಮಗಳು ಪ್ರವಾಹದ ಭೀತಿಯಲ್ಲಿತ್ತು. ಕರಾವಳಿಯಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದ್ದು, ಮಲೆನಾಡಿನ ಹೊಸನಗರ, ತೀರ್ಥಹಳ್ಳಿ, ಸಾಗರ, ಸಿದ್ಧಾಪುರ, ಶಿರಸಿ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ತಾಲೂಕುಗಳಲ್ಲಿಯೂ ನಿನ್ನೆ ಸರಾಸರಿ ಮಳೆಯಾಗಿದೆ.

ಮಳೆಯಿಂದಾಗಿ ಶರಾವತಿ, ತುಂಗಾ, ಭದ್ರಾ, ವರಾಹಿ, ವರದಾ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಜಲಾಶಯದಿಂದ ಈಗಾಗಲೇ ನೀರನ್ನು ಹೊರಬಿಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಕೊಡಗಿನಲ್ಲೂ ಮಳೆ ಹೆಚ್ಚಾಗಿದ್ದು, ಸಾಕಷ್ಟು ಕಡೆ ಭೂಕುಸಿತಗಳಾಗಿವೆ. ಮಳೆಯಿಂದ ಇರ್ಪು, ಮಲ್ಲಳ್ಳಿ ಸೇರಿದಂತೆ ಅನೇಕ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿವೆ.

ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಕೇರಳ, ಸಿಕ್ಕಿಂ, ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗೋವಾ, ಮೇಘಾಲಯ, ನಾಗಾಲ್ಯಾಂಡ್, ಬಿಹಾರ, ಗುಜರಾತ್, ಮಹಾರಾಷ್ಟ್ರ, ಮಾಹೆ ಮುಂತಾದ ಪ್ರದೇಶಗಳಲ್ಲೂ ಇಂದು ಮಳೆಯ ಅಬ್ಬರ ಹೆಚ್ಚಾಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *