ರಾಜಧಾನಿಯಲ್ಲಿ ಒಂದೇ ದಿನ 1.68 ಲಕ್ಷ ಲಸಿಕೆ ಹಂಚಿಕೆ
ಬೆಂಗಳೂರು -ಕೋವಿಡ್ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ ವಿಶೇಷ ಲಸಿಕಾಕರಣ ಅಭಿಯಾನದ ಅಡಿಯಲ್ಲಿ ಒಂದೇ ದಿನದಲ್ಲಿ 1.68 ಲಕ್ಷ ಲಸಿಕೆಗಳನ್ನು ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೋವಿಡ್ ನಿಯಮಾವಳಿ ಅನುಸಾರ ಮಾಡಿಕೊಂಡು, ವಿಶೇಷ ಲಸಿಕಾಕರಣ ಅಭಿಯಾನವನ್ನು ಯಶಸ್ವಿಯಾಗಿ ಏರ್ಪಡಿಸಲಾಗಿತ್ತು.
ಈ ಅಭಿಯಾನದಲ್ಲಿ 65 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, ನಿಗದಿತ ಗುರಿಗಿಂತ 1,68,958 ಮಂದಿಗೆ ಲಸಿಕೆ ನೀಡಲಾಗಿದೆ.
ನಗರದ ಎಲ್ಲಾ ವಲಯಗಳಲ್ಲಿ ಮೈಕ್ರೋ ಪ್ಲಾನ್ ಮಾಡಿಕೊಂಡು ಅತ್ಯಂತ ಯಶಸ್ವಿಯಾಗಿ ಲಸಿಕಾಕರಣ ಅಭಿಯಾನವನ್ನು ನಡೆಸಲಾಗಿದೆ. ಈ ಪೈಕಿ ಪಾಲಿಕೆಯ ಎಂಟೂ ವಲಯಗಳಲ್ಲಿ ಸೆಷನ್‌ಗಳನ್ನು(ಸ್ಥಳಗಳು) ಏರ್ಪಡಿಸಿಕೊಂಡು, ಹೆಚ್ಚು ಲಸಿಕಾಕರಣ ಸಿಬ್ಬಂದಿಯ ಜೊತೆಗೆ ವೈದ್ಯರುಗಳು, ಸ್ಟಾಫ್ ನರ್ಸ್, ಅಶಾ ಕಾರ್ಯಕರ್ತೆಯರು, ಹೋಂಗಾರ್ಡ್ ಗಳು, ಮಾರ್ಷಲ್ ಗಳನ್ನು ನಿಯೋಜನೆ ಮಾಡಿಕೊಂಡು ಲಸಿಕೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿ ಇಂದು ಸರ್ಕಾರಿ ಕಚೇರಿಗಳು, ಬೀದಿ ಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕ್ಯಾಬ್, ಆಟೋ ಚಾಲಕರು, ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು, ಬ್ಯಾಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರೆ ಕಡೆ ಸೆಷನ್ ಗಳನ್ನು ಮಾಡಿ ಲಸಿಕೆ ನೀಡಲಾಗಿದೆ.
ಪ್ರಮುಖವಾಗಿ ವಿಶೇಷ ಲಸಿಕಾಕರಣ ಅಭಿಯಾನದ ಅಂಗವಾಗಿ ನಗರದಲ್ಲಿ ಒಟ್ಟು 1,44,000 ಡೋಸ್ ಕೋವಿಶೀಲ್ಡ್ ಹಾಗೂ 43,000 ಡೋಸ್ ಕೋವಾಕ್ಸಿನ್ ಅನ್ನು ಲಸಿಕೆ ಕೇಂದ್ರಗಳಿಗೆ ವಿತರಿಸಲಾಗಿದೆ.
ಅಲ್ಲದೆ, ಈ ಹಿಂದೆ ಜೂ.4 ರಂದು ಮಾತ್ರ 1.17 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಇದೀಗ ಒಂದೇ ದಿನದಲ್ಲಿ 1.68 ಲಕ್ಷ ಲಸಿಕೆಗಳನ್ನು ನೀಡಲಾಗಿದೆ. ಇದು ದಿನನಿತ್ಯದ ಅತಿದೊಡ್ಡ ಸಾಧನೆಯಾಗಿದೆ ಎಂದು ಗುಪ್ತ ನುಡಿದರು.