ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆಗಳಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಆಯುರ್ವೇದವೂ ಒಂದು
ಹೈಲೈಟ್ಸ್:
- ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಈಗ ಇಂಥ ಸಾಂಪ್ರದಾಯಿಕ ಚಿಕಿತ್ಸೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ
- ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದವೂ ಒಂದು
- ಅಲೋಪಥಿಗೆ ಸಿಕ್ಕಿರುವ ಮನ್ನಣೆ ಆಯುರ್ವೇದ ಮತ್ತು ಇತರ ಪರ್ಯಾಯಗಳಿಗೆ ಸಿಕ್ಕಿಲ್ಲ ಎಂಬುದು ವಾಸ್ತವ.
‘ಹಲವು ವರ್ಷಗಳ ಹಿಂದೆ ನನ್ನ ಹೆಂಡತಿಗೆ ತೀವ್ರ ಬೆನ್ನು ನೋವು ಉಂಟಾಗಿತ್ತು. ನ್ಯೂರಾಲಜಿ ತಜ್ಞರನ್ನು ಸಂಪರ್ಕಿಸಿದೆವು. ಎಂಆರ್ಐ ಸೇರಿ ಎಲ್ಲ ಪರೀಕ್ಷೆ ಮಾಡಿದರೂ ಪ್ರಯೋಜನವಾಗಲಿಲ್ಲ. ನನ್ನ ಭಾವ, ಅಂಕ್ಯುಪಂಕ್ಚರ್ ತಜ್ಞರ ಹತ್ತಿರ ಒಮ್ಮೆ ತೋರಿಸೋಣ ಎಂದ. ಡಾಕ್ಟರ್ ಆಗಿ ಸ್ವಲ್ಪ ಮುಜುಗರವಾದರೂ, ಹೋದೆವು. ಅಲ್ಲಿ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಆತ ಬೆನ್ನಹುರಿಯನ್ನು 10 ನಿಮಿಷ ಒತ್ತಿ ಹೀಲಿಂಗ್ ನಡೆಸಿದ. ನಾನು ಉತ್ಪ್ರೇಕ್ಷಿಸಿ ಹೇಳುತ್ತಿಲ್ಲ. ನಂತರ ಆಕೆಗೆ ಎಂದೂ ಬೆನ್ನು ನೋವು ಬರಲಿಲ್ಲ! ಹೀಗೆ ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ಹಲವು ಸಾಂಪ್ರದಾಯಿಕ ಹೀಲಿಂಗ್ ಚಿಕಿತ್ಸಾ ಪದ್ಧತಿಗಳು ಇವೆ. ಅವುಗಳಿಗೆ ಬಹುಶಃ ವೈಜ್ಞಾನಿಕ ದಾಖಲೆಗಳು ಇರಲಿಕ್ಕಿಲ್ಲ. ಆದರೆ ಅವುಗಳಿಂದಲೂ ಪ್ರಯೋಜನ ಇದೆ.’ ಹೀಗೆ ತಮ್ಮ ಅನುಭವವನ್ನು ಸದ್ಗುರು ಜಗ್ಗಿ ವಾಸುದೇವ್ ಜತೆ ಸಂವಾದವೊಂದರಲ್ಲಿ ಹಿಂದೊಮ್ಮೆ ವಿವರಿಸಿದ್ದು ಖ್ಯಾತ ಹೃದ್ರೋಗತಜ್ಞ ಡಾ. ದೇವಿಶೆಟ್ಟಿ. ಹೀಗಿದ್ದರೂ, ಆಯುರ್ವೇದ ವೈದ್ಯರು ಅಲೋಪಥಿ ವೈದ್ಯರಾಗಲು ಸಾಧ್ಯವಿಲ್ಲ ಎಂದೂ ಅವರು ಮತ್ತೊಂದು ಕಡೆ ಹೇಳಿದ್ದಾರೆ. ಅದು ಒಪ್ಪಬಹುದಾದ ಸಂಗತಿಯೇ.
ಮಂಗಳೂರಿಗೆ ಸಮೀಪದ ಕಾಸರಗೋಡು ಜಿಲ್ಲೆಯ ಉಳಿಯತ್ತಡ್ಕದಲ್ಲಿ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟಾಲಜಿ (ಐಎಡಿ) ಕೇಂದ್ರವಿದೆ. 1999ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯಲ್ಲಿ ಆನೆಕಾಲು ಕಾಯಿಲೆಯಿಂದ ಬಳಲುವವರಿಗೆ ಅಲೋಪಥಿ, ಆಯುರ್ವೇದ, ಯೋಗವನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 2005ರಿಂದೀಚೆಗೆ ದೇಶ-ವಿದೇಶಗಳಿಂದ ಇಲ್ಲಿಗೆ 4,600ಕ್ಕೂ ಹೆಚ್ಚು ರೋಗಿಗಳು ದಾಖಲಾಗಿ, ಎಲ್ಲರಂತೆ ನಡೆಯುವ ಸಾಮರ್ಥ್ಯ ಗಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್ ಒ) ವರದಿಯಲ್ಲೂ ಈ ಸಂಸ್ಥೆಯನ್ನು ಆನೆಕಾಲು ಕಾಯಿಲೆಗೆ ಚಿಕಿತ್ಸೆ ಒದಗಿಸುವ ಮುಂಚೂಣಿಯ ಕೇಂದ್ರ ಎಂದು ಪ್ರಸ್ತಾಪಿಸಿತ್ತು. ಐಎಡಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಆರ್.ನರಹರಿ ಅವರು ಅಲೊಪಥಿ ವೈದ್ಯರಾಗಿದ್ದರೂ, ಆಯುರ್ವೇದದ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಸ್ವತಃ ವರ್ಷಾನುಗಟ್ಟಲೆ ಸಂಶೋಧನೆ ಮಾಡಿದ್ದಾರೆ. ಎರಡರ ಸಂಯೋಜನೆಯೂ ಸಾಧ್ಯ ಮತ್ತು ಇದರಿಂದ ದೀರ್ಘಕಾಲೀನವಾಗಿ ಕಾಡುವ ಹಲವು ಕಾಯಿಲೆಗೆ ಚಿಕಿತ್ಸೆ ಸಾಧ್ಯ ಎಂಬುದು ಅವರ ವಿಶ್ವಾಸ. ಆದರೆ ಈ ನಿಟ್ಟಿನಲ್ಲಿ ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಿಗೆ ಹೊಸ ಕಾಯಕಲ್ಪ ನೀಡಬೇಕಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಸುಮಾರು 12ಲಕ್ಷ ಮಂದಿ ಅಲೋಪಥಿ ವೈದ್ಯರಿದ್ದರೆ, ಸುಮಾರು 8 ಲಕ್ಷ ಮಂದಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ವೈದ್ಯರೂ ಇದ್ದಾರೆ.
ಕಳೆದ 2005-20ರ ನಡುವೆ ಗ್ರಾಮೀಣ ಭಾರತದಲ್ಲಿ ಅಲೋಪಥಿ ವೈದ್ಯರು ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಳವಾಗಿದ್ದರೂ, ಸರ್ಜನ್, ಗೈನಕಾಲಜಿಸ್ಟ್, ಮಕ್ಕಳ ವೈದ್ಯರ ಸಂಖ್ಯೆಯಲ್ಲಿ ಶೇ.76ರಷ್ಟು ಕೊರತೆ ಇದೆ. ಇವತ್ತಿಗೂ ಹಳ್ಳಿ ಕಡೆ ನುರಿತ ಅಲೋಪಥಿ ವೈದ್ಯರ ಕೊರತೆ ಇದೆ. ಆಯುರ್ವೇದ, ಹೋಮಿಯೋಪಥಿ, ಸಿದ್ಧ, ಯುನಾನಿ ಮತ್ತು ನಾಟಿ ವೈದ್ಯರನ್ನು ಗ್ರಾಮೀಣ ಜನ ಹೆಚ್ಚಾಗಿ ಅವಲಂಬಿಸಿದ್ದಾರೆ. ಅಲೋಪಥಿ ಅಭಿವೃದ್ಧಿ, ಸಂಶೋಧನೆಗಳಿಗೆ ಸಿಕ್ಕಿರುವ ಮನ್ನಣೆ, ಬಜೆಟ್ ಬೆಂಬಲ ಆಯುರ್ವೇದ ಮತ್ತು ಇತರ ಪರ್ಯಾಯಗಳಿಗೆ ಸಿಕ್ಕಿಲ್ಲ ಎಂಬುದು ವಾಸ್ತವ. ಈ ನಿರ್ಲಕ್ಷ್ಯದ ಪರಿಣಾಮ ಆಯುರ್ವೇದ ವೈದ್ಯ ಸಮುದಾಯ ಕೀಳರಿಮೆಗೆ ಹಾಗೂ ಅಲೋಪಥಿ ವೈದ್ಯರು ಮೇಲರಿಮೆಗೆ ಒಳಗಾಗಿದ್ದರೂ, ಆಶ್ಚರ್ಯವಿಲ್ಲ. ಆದರೆ ಇದರ ಲಾಭ-ನಷ್ಟ ಯಾರಿಗೆ ಎಂಬುದನ್ನು ತುರ್ತಾಗಿ ಮನಗಾಣಬೇಕಾಗಿದೆ.
ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆಗಳಲ್ಲಿ ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಆಯುರ್ವೇದವೂ ಒಂದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಈಗ ಇಂಥ ಸಾಂಪ್ರದಾಯಿಕ ಚಿಕಿತ್ಸೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಆಯುರ್ವೇದದ ತವರು ಭಾರತದಲ್ಲಿ ಅದಕ್ಕೆ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ಬರಲು 2014ರ ತನಕ ಸುದೀರ್ಘ ಕಾಯಬೇಕಾಯಿತು! ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ 2014ರ ನವೆಂಬರ್ 9ರಂದು ಮೊದಲ ಬಾರಿಗೆ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿಯಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಆದ್ಯತೆ ನೀಡಲು ಪ್ರತ್ಯೇಕ ಆಯುಷ್ ಸಚಿವಾಲಯವನ್ನು ಸ್ಥಾಪಿಸಲಾಯಿತು. ಇದಕ್ಕೂ ಮೊದಲು 1995ರಲ್ಲಿ ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪಥಿ (ಐಎಸ್ಎಂಆ್ಯಂಡ್ಎಚ್) ಎಂಬ ಇಲಾಖೆ ಇತ್ತು ಹಾಗೂ ನಂತರ 2003ರಲ್ಲಿ ಆಯುಷ್ ಇಲಾಖೆ ಎಂದು ಮರು ನಾಮಕರಣಗೊಳಿಸಿ ಇಲಾಖೆಯಾಗಿಸಲಾಯಿತು.
ಸ್ವತಂತ್ರ ಭಾರತದಲ್ಲಿ ಆಯುರ್ವೇದಕ್ಕೆ ಸರಕಾರಗಳಿಂದ ನಿರೀಕ್ಷಿತ ಬೆಂಬಲ ಸಿಗದಿದ್ದುದೂ, ಆ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿಯಲ್ಲಿ ಕೊರತೆಯಾಗಲು ಕಾರಣಗಳಲ್ಲೊಂದು. ಜತೆಗೆ ಪಾಶ್ಚಿಮಾತ್ಯ ಅಲೋಪಥಿಯಲ್ಲಿ ನಡೆದ ವ್ಯವಸ್ಥಿತ ಹಾಗೂ ವಿಸ್ತೃತ ಸಂಶೋಧನೆ ಮತ್ತು ಅಭಿವೃದ್ಧಿ, ಕಾಯಿಲೆಯನ್ನು ತುರ್ತಾಗಿ ಗುಣಪಡಿಸಿ ಜೀವ ರಕ್ಷಿಸುವ ಸಾಮರ್ಥ್ಯ, ಹೂಡಿಕೆ, ಸರಕಾರದ ಬೆಂಬಲ, ರಾಜಕೀಯ ಮತ್ತು ಆರ್ಥಿಕ ವಲಯದ ಲಾಬಿ, ವಿದೇಶಿ ಹೂಡಿಕೆಯ ಪ್ರಭಾವ ಬೀರಿತು. 1970ರಿಂದೀಚೆಗೆ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಅಲೋಪಥಿ ಮುಂಚೂಣಿಗೆ ಬಂದ ನಂತರ ಸಾಂಪ್ರದಾಯಿಕ ಪದ್ಧತಿಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರೆ ಇದರ ಜತೆ ಗಮನಿಸಬೇಕಾದ ಅಂಶವೆಂದರೆ, ಔಷಧ ಉತ್ಪಾದನೆಯ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಅತ್ಯಧಿಕ ಔಷಧ ಉತ್ಪಾದಿಸುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹೂಡಿಕೆ ಅಭಿವೃದ್ಧಿ ಮತ್ತು ಸೌಲಭ್ಯ ಏಜೆನ್ಸಿ ಇನ್ವೆಸ್ಟ್ ಇಂಡಿಯಾದ ಪ್ರಕಾರ, ಭಾರತದಲ್ಲಿ ಈಗ ಪ್ರತಿ ವರ್ಷ ಸರಾಸರಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಔಷಧ ವಹಿವಾಟು ನಡೆಯುತ್ತಿದೆ. ಜಗತ್ತಿನ ಅತಿ ದೊಡ್ಡ ಜೆನೆರಿಕ್ ಔಷಧ ಉತ್ಪಾದಕ. ವಿಶ್ವದಲ್ಲಿ ಉತ್ಪಾದನೆಯಾಗುವ ಜೆನೆರಿಕ್ ಔಷಧಗಳಲ್ಲಿ ಶೇ.20ರಷ್ಟನ್ನು ಭಾರತವೇ ಪೂರೈಸುತ್ತದೆ. ಹೀಗಿದ್ದರೂ, ಅಲೊಪತಿ-ಆಯುರ್ವೇದ ಎರಡಕ್ಕೂ ಅವುಗಳದ್ದೇ ಇತಿ ಮಿತಿಗಳಿವೆ ಎಂಬುದನ್ನು ಎಲ್ಲರೂ ಬಹುತೇಕ ಎಲ್ಲರೂ ಒಪ್ಪುತ್ತಾರೆ. ಜನತೆಯೂ ಇದರ ಅನುಭವ ಪಡೆದಿದ್ದಾರೆ. ಹೀಗಾಗಿಯೇ ಆಯುರ್ವೇದ ಈಗಲೂ ಅಸ್ತಿತ್ವದಲ್ಲಿದೆ. ಆದರೆ ಆಯುರ್ವೇದದ ಪ್ರತಿಪಾದಕರಿಗೂ ಐಎಂಎಗೂ ನಡೆಯುತ್ತಿರುವ ಸಂಘರ್ಷಕ್ಕೆ ಇತಿಹಾಸವೇ ಇದೆ. ಇಂಡಿಯನ್ ಮೆಡಿಕಲ್ ಅಸೋಸಿಯೆಶನ್ (ಐಎಂಎ) ಮತ್ತು ಕೇಂದ್ರ ಸರಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ.
ಕಳೆದ ವರ್ಷ ಕೇಂದ್ರ ಸರಕಾರ ಆಯುರ್ವೇದದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಾನಾ ಬಗೆಯ ಶಸ್ತ್ರ ಚಿಕಿತ್ಸೆಯಲ್ಲಿ ತರಬೇತಿ ಪಡೆಯಲು ಅನುಮತಿ ನೀಡಿದಾಗ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ವಿರುದ್ಧ ಬೀದಿಗಿಳಿದು ಪ್ರತಿಭಟಿಸಿತ್ತು. ಶಸ್ತ್ರಚಿಕಿತ್ಸೆ ನಡೆಸಲು ಅಗತ್ಯವಿರುವ ತರಬೇತಿ ಮತ್ತು ಆಧುನಿಕ ವೈದ್ಯಕೀಯ ಶಿಕ್ಷಣವನ್ನು ನೀಡದೆಯೇ, ಆಯುರ್ವೇದ ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಿದರೆ ಆರೋಗ್ಯ ವ್ಯವಸ್ಥೆಗೆ ಅನಾಹುತಕಾರಿಯಾಗಿ ಪರಿಣಮಿಸಬಹುದು, ಎರಡೂ ಪದ್ಧತಿಗಳನ್ನು ಒಟ್ಟಿಗೆ ಬೆಸೆಯಬಾರದು ಎಂದು ಐಎಂಎ ಬಲವಾಗಿ ವಾದಿಸಿತ್ತು. ಆದರೆ ಸುಶ್ರುತನ ಕಾಲದಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು ಎಂಬುದು ಆಯುರ್ವೇದ ಬೆಂಬಲಿಗರ ನಿಲುವು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಸರಕಾರ ನಿರ್ಧರಿಸುವ ಮುನ್ನ ವಿಸ್ತೃತ ಸಮಾಲೋಚನೆ ನಡೆಸಬೇಕಾದ ಅಗತ್ಯ ಇತ್ತು ಎಂಬ ವಾದವನ್ನು ಒಪ್ಪೋಣ. ಆದರೆ ಈ ಹಿಂದಿನಿಂದಲೂ ಆಧುನಿಕ ವೈದ್ಯಕೀಯದ ಜತೆಗೆ ಸಾಂಪ್ರದಾಯಿಕ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಸಿದ್ಧ ಮತ್ತು ಹೋಮಿಯೋಪಥಿಯನ್ನು ಸಮನ್ವಯಗೊಳಿಸುವುದಕ್ಕೆ ಐಎಂಎ ಬಹಿರಂಗವಾಗಿಯೇ ವಿರೋಧಿಸುತ್ತಲೇ ಬಂದಿದೆ. ಆಯುರ್ವೇದ ಮತ್ತು ಅಲೋಪಥಿಯ ಸಮನ್ವಯವನ್ನು “ಮಿಕ್ಸೋಪಥಿ’ ಎಂದೇ ಐಎಂಎ ಕರೆದಿದೆ. ಇವೆರಡೂ ಸ್ವತಂತ್ರವಾಗಿಯೇ ಬೆಳೆಯಲು ಬಿಡಬೇಕು. ಎರಡೂ ವಿಧಾನಗಳನ್ನು ಒಬ್ಬರೇ ಕೊಡುವಂತಾಗಬಾರದು. ಇದರಿಂದ ಆಯುರ್ವೇದವೇ ಅಂತ್ಯವಾಗಲಿದೆ. ಮಿಕ್ಸೋಪಥಿಗೆ ಗ್ರಾಮೀಣ ಜನ ಏಕೆ ಒಳಗಾಗಬೇಕು? ಸರಿಯಾಗಿ ಆಪರೇಷನ್ ಮಾಡಲು ಬರದವರಿಂದ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರೆ ಅಪಾಯವಾಗದೆ ಇದ್ದೀತೆ? ಗ್ರಾಮೀಣ ಜನತೆಗೂ ಉತ್ತಮ ಗುಣಮಟ್ಟದ ಹೆಲ್ತ್ಕೇರ್ ಸೌಲಭ್ಯ ಸಿಗಬೇಕು ಎಂದು ಐಎಂಎ ವಾದಿಸುತ್ತದೆ.
ಮತ್ತೊಂದು ಕಡೆ ದುಬಾರಿಯಾಗುತ್ತಿರುವ ಚಿಕಿತ್ಸೆ, ಪಾರ್ಶ್ವ ಪರಿಣಾಮಗಳಿಂದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಲಾಗದೆ ಮನೆ ಮಠ ಮಾರಿದವರೆಷ್ಟೋ. ಆಯುರ್ವೇದ, ಪ್ರಕೃತಿ ಚಿಕಿತ್ಸೆಯ ಹೆಸರಿನಲ್ಲೂ ದುಬಾರಿ ಶುಲ್ಕ ವಸೂಲಿ ಮಾಡುವವರಿದ್ದಾರೆ. ಸಾಂಪ್ರದಾಯಿಕ ಔಷಧಗಳಿಗೆ ಸಂಬಂಧಿಸಿ ದರ ನಿಯಂತ್ರಣ ಪ್ರಾಧಿಕಾರದ ಸೂಕ್ತ ವ್ಯವಸ್ಥೆ ಸದ್ಯಕ್ಕೆ ಇಲ್ಲದಿರುವುದು ಇದಕ್ಕೆ ಕಾರಣ. ಹೀಗಾಗಿ ಹಲವು ಸವಾಲುಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಹೀಗಿದ್ದರೂ, ಸಂಘರ್ಷಕ್ಕಿಂತ ಸೌಹಾರ್ದ ಮಾತುಕತೆಯ ಮೂಲಕ ಭಿನ್ನಮತ ನಿವಾರಿಸಿ ಸಾರ್ವಜನಿಕ ಆರೋಗ್ಯ ವೃದ್ಧಿ, ಸಂರಕ್ಷಣೆಗೆ ಗಮನ ಹರಿಸಬೇಕಾಗಿದೆ. ಆಯುರ್ವೇದವನ್ನು ಪ್ರತ್ಯೇಕವಾಗಿ ಬೆಳೆಸುವ ಉದ್ದೇಶದಿಂದಲೇ ಆಯುಷ್ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ಆಯುರ್ವೇದ ಚಿಕಿತ್ಸೆ ಮತ್ತು ಔಷಧಗಳ ದರ ನಿಯಂತ್ರಣಕ್ಕೂ ಸಿದ್ಧತೆ ನಡೆಯುತ್ತಿವೆ. ಸಂಶೋಧನೆಗೂ ಕ್ರಮೇಣ ಬಜೆಟ್ ಅನುದಾನಕ್ಕೆ ಹಾದಿ ತೆರೆಯುತ್ತಿದೆ. ಆದರೆ ಯಾವುದೇ ವಿವಾದಗಳಿದ್ದರೂ, ಮಾತುಕತೆಯ ಚೌಕಟ್ಟಿನಲ್ಲಿ ಪರಿಹರಿಸುವುದು ಈಗಿನ ತುರ್ತಲ್ಲವೇ. “ಮಿಕ್ಸೊಪಥಿ’ ಎಂಬ ಹಣೆಪಟ್ಟಿ ಕಟ್ಟಿ ವಿರೋಧಿಸುವುದು, ಬೀದಿಗಿಳಿಯುವುದು ಸೂಕ್ತವೇ? “ಮಿಕ್ಸೊಪಥಿಯ ವಿರುದ್ಧದ ನಮ್ಮ ಹೋರಾಟ ಪ್ರಜಾಸತ್ತಾತ್ಮಕ” ಎಂದು ಐಎಂಎನ ಹಾಲಿ ಅಧ್ಯಕ್ಷ ಡಾ.ಜೆ.ಎ ಜಯಲಾಲ್ ಹೇಳುತ್ತಾರೆ. ” ಮಿಕ್ಸೊಪಥಿಯಿಂದ ಖಿಚಡಿ ವೈದ್ಯಕೀಯ ಮತ್ತು ಹೈಬ್ರಿಡ್ ಡಾಕ್ಟರ್ಗಳು ಸೃಷ್ಟಿಯಾಗಲಿದಾರೆ’ ಎಂದು ಲೇವಡಿ ಮಾಡಿದ್ದಾರೆ ಮಾಜಿ ಅಧ್ಯಕ್ಷ ರಾಜನ್ ಶರ್ಮಾ.
ಕಳೆದ ವರ್ಷ ಜೈಪುರ ಮತ್ತು ಜಾಮ್ನಗರದಲ್ಲಿ ಎರಡು ಆಯುರ್ವೇದ ಕೇಂದ್ರಗಳ ಉದ್ಘಾಟನೆಯ ವೇಳೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೋಮ್, ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಬಗ್ಗೆ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಡಬ್ಲ್ಯು ಎಚ್ ಒ ತನ್ನ ಕೇಂದ್ರವನ್ನು ತೆರೆಯಲಿದೆ ಎಂದಿರುವುದು ಕುತೂಹಲಕರ ಬೆಳವಣಿಗೆ.