ಲಾಕ್‌ಡೌನ್ ಅವಧಿಯಲ್ಲಿ ಬೀದಿನಾಯಿ, ಹಸುಗಳ ಆಹಾರಕ್ಕಾಗಿ ₹16 ಲಕ್ಷ ಖರ್ಚು ಮಾಡಿದ ಬಿಬಿಎಂಪಿ

ಹೈಲೈಟ್ಸ್‌:

  • ಲಾಕ್‌ಡೌನ್‌ ಅವಧಿಯಲ್ಲಿ ಪ್ರಾಣಿಗಳಿಗಾಗಿ ₹16 ಲಕ್ಷ ಖರ್ಚು ಮಾಡಿದ ಬಿಬಿಎಂಪಿ
  • ಬೆಂಗಳೂರು ನಗರದಲ್ಲಿ ಬೀದಿನಾಯಿ, ಹಸುಗಳ ಆಹಾರಕ್ಕಾಗಿ ₹16 ಲಕ್ಷ ಖರ್ಚು
  • ಬೀದಿ ನಾಯಿಗಳಿಗೆ ಆಹಾರಕ್ಕಾಗಿ 11.60 ಲಕ್ಷ ರೂ., ದನಗಳಿಗೆ ಮೇವು 3.40 ಲಕ್ಷ ರೂ. ವೆಚ್ಚ
  • ಬಿಬಿಎಂಪಿಯ ವಿಶೇಷ ಆಯುಕ್ತರು (ಪಶುಪಾಲನೆ) ಸ್ಪಷ್ಟನೆ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಹೇರಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು, ನಿರ್ಲಕ್ಷಿತ ಹಾಗೂ ಗೋಶಾಲೆಗಳಲ್ಲಿನ ಹಸು, ಕುದುರೆಗಳ ಮೇವಿಗಾಗಿ ಬಿಬಿಎಂಪಿಯು 16 ಲಕ್ಷ ರೂ. ಖರ್ಚು ಮಾಡಿದೆ.

ಲಾಕ್‌ಡೌನ್‌ ವೇಳೆ ಹೋಟೆಲ್‌, ಬೇಕರಿ, ತಿಂಡಿ-ತಿನಿಸುಗಳ ಅಂಗಡಿಗಳು, ಬೀದಿಬದಿಯ ಹೋಟೆಲ್‌ಗಳು ಮುಚ್ಚಿದ್ದರಿಂದ ಬೀದಿ ನಾಯಿಗಳಿಗೆ ಆಹಾರ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆ ನಿವಾರಿಸುವಂತೆ ಪ್ರಾಣಿ ಪ್ರಿಯರು, ಕ್ಯೂಪಾ ಪ್ರಾಣಿ ಕಲ್ಯಾಣ ಸಂಸ್ಥೆ ಹಾಗೂ ಇಂಡಿಯನ್‌ ವೆಲ್‌ಫೇರ್‌ ಆರ್ಗನೈಸೇಷನ್‌ನ ಅಧ್ಯಕ್ಷರು ಮಾಡಿಕೊಂಡ ಮನವಿ ಮೇರೆಗೆ ಮಾನವೀಯತೆ ದೃಷ್ಟಿಯಿಂದ ಬೀದಿ ನಾಯಿಗಳಿಗೆ ಹಾಗೂ ಹಸುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಬಿಬಿಎಂಪಿಯ ವಿಶೇಷ ಆಯುಕ್ತರು (ಪಶುಪಾಲನೆ) ಸ್ಪಷ್ಟಪಡಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ಕಾರ್ಯಕ್ರಮ ನಿರ್ವಹಿಸುವ ಸೇವಾ ಸಂಸ್ಥೆಗಳಿಗೆ ಊಟ ನೀಡುವ ಜವಾಬ್ದಾರಿ ವಹಿಸಲಾಗಿತ್ತು. ನಿರ್ಲಕ್ಷಿಸಲ್ಪಟ್ಟ ದನಗಳು ಹಾಗೂ ಗೋಶಾಲೆಗಳಲ್ಲಿನ ಹಸುಗಳಿಗೆ ಮೇವು ಪೂರೈಸುವ ಹೊಣೆಯನ್ನು ಕ್ಯೂಪಾ ಪ್ರಾಣಿ ಕಲ್ಯಾಣ ಸಂಸ್ಥೆಗೆ ನೀಡಲಾಗಿತ್ತು. ಬೀದಿ ನಾಯಿಗಳಿಗೆ ಆಹಾರ ನೀಡಲು 11.60 ಲಕ್ಷ ರೂ., ದನಗಳಿಗೆ ಮೇವು ಪೂರೈಸಲು 3.40 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೀದಿ ನಾಯಿಗಳ ಆಹಾರಕ್ಕೆ ಮತ್ತು ಹಸುಗಳ ಮೇವಿಗೆ ಒಟ್ಟು 15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಮೊತ್ತವನ್ನು ಈವರೆಗೆ ಯಾವುದೇ ಸೇವಾ ಸಂಸ್ಥೆಗೆ ಪಾವತಿಸಿಲ್ಲ. ಎಬಿಸಿ-ಎಆರ್‌ವಿ ಕಾರ್ಯಕ್ರಮ ನಿರ್ವಹಿಸುವ ಸೇವಾ ಸಂಸ್ಥೆಗಳು ತಮ್ಮ ಸ್ವಂತ ಹಣಕಾಸಿನ ವ್ಯವಸ್ಥೆಯಲ್ಲಿ ಆಹಾರ ಒದಗಿಸಿವೆ. ಖರ್ಚು-ವೆಚ್ಚದ ದಾಖಲೆಗಳನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಪ್ರತಿ ಬೀದಿ ನಾಯಿಯ ಆಹಾರಕ್ಕೆ ದಿನಕ್ಕೆ 5.60 ರೂ. ಖರ್ಚು ಮಾಡಲಾಗಿದೆ. ಗೋ ಶಾಲೆಗಳಿಗೆ ನಿತ್ಯ 8 ಟನ್‌ ಹಾಗೂ ಕ್ಯೂಪಾ ಸಂಸ್ಥೆಗೆ 2 ಟನ್‌ನಂತೆ ಎಂಟು ದಿನಗಳಿಗೆ ಒಟ್ಟು 56 ಟನ್‌ ಮೇವು ಪೂರೈಕೆ ಮಾಡಲಾಗಿದೆ. ಪ್ರತಿ ಟನ್‌ಗೆ 6 ಸಾವಿರ ರೂ. ನಂತೆ ಒಟ್ಟು 3.40 ಲಕ್ಷ ರೂ. ವೆಚ್ಚ ಮಾಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *