CoronaVirus Live Update| ದೇಶದಲ್ಲಿ ತಗ್ಗುತ್ತಿರುವ ಕೊರೋನಾ ಸೋಂಕು, ಚೇತರಿಕೆ ಪ್ರಮಾಣದಲ್ಲೂ ಏರಿಕೆ!
ನವ ದೆಹಲಿ (ಜೂನ್ 25); ಕೊರೋನಾ ಎರಡನೇ ಅಲೆ ಕಳೆದ ಎರಡು ತಿಂಗಳಿನಿಂದ ಭಾರತದಲ್ಲಿ ಸಾಕಷ್ಟು ಸಾವು-ನೋವಿಗೆ ಕಾರಣವಾಗಿದೆ. ಈವರೆಗೆ ಸಾವಿರಾರು ಜನ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅಸಂಖ್ಯಾತ ಮಕ್ಕಳು ಅನಾಥರಾಗಿದ್ದು, ಇಡೀ ದೇಶ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದೆ. ಆದರೆ, ಕಳೆದ ಒಂದು ವಾರದಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯ ಬೆಳವಣಿಗೆಯಾಗಿದೆ. ಪರಿಣಾಮ ಕಳೆದ ಒಂದು ವಾರದಲ್ಲಿ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು ಲಾಕ್ಡೌನ್ ಅನ್ನು ತೆರವುಗೊಳಿಸಿವೆ. ಈ ನಡುವೆ ಕೇಂದ್ರ ಆರೋಗ್ಯ ಇಲಾಖೆ ಇಂದು ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 51,667 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಚೇತರಿಕೆ ಪ್ರಮಾಣ ಶೇ.96.66% ಕ್ಕೆ ಏರಿದೆ ಎಂದು ತಿಳಿಸಿದೆ.
ಆದರೆ, ಈ ನಡುವೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಹೊಸ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಈವರೆಗೆ 40ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ವೈರಸ್ ಜನರಲ್ಲಿರುವ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ಮೂಲಕ ಸಾವಿಗೂ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದೇ ಡೆಲ್ಟಾ ಪ್ಲಸ್ ಸೋಂಕಿನ ಕಾರಣಕ್ಕೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿ, ಕ್ಯಾನ್ಬೇರ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಈ ಸೋಂಕು ಮೂರನೇ ಕೊರೋನಾ ಅಲೆಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ತಜ್ಞರು ಈ ಸಾಧ್ಯತೆಗಳನ್ನು ತಳ್ಳಿಹಾಕಿದ್ದು, ಡೆಲ್ಟಾ ಪ್ಲಸ್ ವೈರಸ್ ಮೂರನೇ ಅಲೆಗೆ ಕಾರಣವಾಗುತ್ತದೆ ಎನ್ನಲು ಯಾವುದೇ ಸಾಕ್ಷಿ ಇಲ್ಲ ಎಂದು ತಿಳಿಸಿರುವುದು ಸಮಾಧಾನಕ್ಕೆ ಕಾರಣವಾಗಿದೆ.
ಡೆಲ್ಟಾ ಪ್ಲಸ್ ಸೋಂಕಿಗೂ ಮೂರನೇ ಅಲೆಗೂ ಸಂಬಂಧ ಇಲ್ಲ:
ಡೆಲ್ಟಾ ಪ್ಲಸ್ ವೈರಸ್ ಕೊರೋನಾ ಮೂರನೇ ಅಲೆಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಜಿನೋಮ್ ತಜ್ಮರು ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬುದಕ್ಕೆ ಯಾವುದೇ ಸಾಕ್ಷಿ, ಆಧಾರವಿಲ್ಲ ಎನ್ನುವ ಮೂಲಕ ಆತಂಕವನ್ನು ದೂರ ಮಾಡಿದ್ಧಾರೆ.
Institute of Genomics and Integrative Biology (ಐಜಿಐಬಿ) ನಿರ್ದೇಶಕ ಡಾ.ಅನುರಾಗ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, “ಈಗ ಕಾಣಿಸಿಕೊಂಡಿರುವ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ಮೂರನೇ ಅಲೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಕೊರೋನಾ 3ನೇ ಅಲೆಯ ತೀವ್ರತೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದಿದ್ದಾರೆ. ಜೊತೆಗೆ ಕೊರೊನಾ ಎರಡನೇ ಅಲೆಯಲ್ಲಿ ಎಚ್ಚರಿಕೆ ತೆಗೆದುಕೊಳ್ಳುವುದನ್ನು ನಿಲ್ಲಿಸದಂತೆ ಸಲಹೆ ನೀಡಿದ್ದಾರೆ.
“ನಮ್ಮ ಸಂಸ್ಥೆ ಜೂನ್ ತಿಂಗಳಲ್ಲಿ ಮಹಾರಾಷ್ಟ್ರದಿಂದ 3,500 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆ ನಡೆಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಮಾದರಿಗಳನ್ನು ಕಲೆಕ್ಟ್ ಮಾಡಲಾಗಿತ್ತು. ಈ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೂ, ಇವುಗಳ ಸಂಖ್ಯೆ ಶೇಕಡಾಕ್ಕಿಂತ ಒಂದಕ್ಕಿಂತ ಕಡಿಮೆ ಇರುತ್ತವೆ” ಎಂದು ಡಾ.ಅನುರಾಗ್ ಅಗರ್ವಾಲ್ ಹೇಳಿದ್ದಾರೆ.
ಈ ರೂಪಾಂತರಿ ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿಯೂ ಅವುಗಳು ಹೆಚ್ಚು ಎಂದು ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಪದೆಸ್ತುತ ಪರಿಸ್ಥಿತಿ ಸ್ಥಿರವಾಗಿ ಕಾಣುತ್ತಿವೆ. ಆದರೆ, ಸದ್ಯಕ್ಕೆ ನಾವು ಡೆಲ್ಟಾ ಪ್ಲಸ್, ಮೂರನೇ ಅಲೆ ಬಗ್ಗೆ ಚಿಂತೆ ಮಾಡುವ ಮೊದಲು, ಎರಡನೇ ಅಲೆಯನ್ನು ಕೊನೆಗೊಳಿಸುವ ಕುರಿತು ಗಮನ ಹರಿಸಬೇಕು” ಎಂದು ಡಾ ಅಗರ್ವಾಲ್ ಭರವಸೆ ವ್ಯಕ್ತಪಡಿಸಿದ್ದಾರೆ.