ರೇಖಾ ಕದಿರೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳ ಪೈಕಿ ಓರ್ವ ಪೊಲೀಸ್ ವಶಕ್ಕೆ?
ಹೈಲೈಟ್ಸ್:
- ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ
- ಓರ್ವ ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ ?
- ಇತರ ಆರೋಪಿಗಳಿಗೆ ಮುಂದುವರಿದ ಶೋಧ ಕಾರ್ಯ
ಬೆಂಗಳೂರು: ಮಾಜಿ ಬಿಬಿಎಂಪಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೊಸೂರು ರಸ್ತೆಯ ಬಳಿ ತಲೆಮರೆಸಿಕೊಂಡಿದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು,ಕಾಟನ್ ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ಇಬ್ಬರು ಪ್ರಮುಖ ಆರೋಪಿಗಳಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಗುರವಾರ ಬೆಳಗ್ಗೆ ರೇಖಾ ಕದಿರೇಶ್ ಅವರ ಹತ್ಯೆ ನಡೆದಿತ್ತು. ಮೂವರು ಈ ಕೃತ್ಯವನ್ನು ಎಸಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈಗಾಗಲೇ 50 ಅಧಿಕ ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಿಬ್ಬರು ಪರಾರಿಯಾಗಿದ್ದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅಲ್ಲಿ ಪೊಲೀಸರು ತಮ್ಮ ಶೋಧ ಕಾರ್ಯ ಮುಂದುವರಿಸಿದ್ದಾರೆ.
2018 ರಲ್ಲಿ ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಅದೇ ಆರೋಪಿಗಳು ಇದೀಗ ಈ ಕೃತ್ಯವನ್ನು ಭಾಗಿಯಾಗಿರುವ ಸಾಧ್ಯತೆ ಇದೆ. ಹತ್ಯೆಗೆ ವೈಯಕ್ತಿಕ ಕಾರಣ ಅಥವಾ ಹಣಕಾಸು ವ್ಯವಹಾರ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಅಲ್ಲದೆ ರಾಜಕೀಯ ವೈಷಮ್ಯ ಇದರ ಹಿಂದೆ ಇದ್ಯಾ ಎಂಬ ಆಮಾಯದಲ್ಲೂ ತನಿಖೆ ನಡೆಯುತ್ತಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೃತದೇಹದ ಅಂತಿಮ ದರ್ಶನ ಪಡೆದಿದ್ದಾರೆ. ಆರೋಪಿಗಳು ಎಷ್ಟೇ ಬಲಿಷ್ಠ ಆದರೂ ಅವರನ್ನು ಬಂಧಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಇನ್ನು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು ರೇಖಾ ಕದಿರೇಶ್ ಅವರ ನಿವಾಸದಲ್ಲಿ ನೂರಾರು ಸಂಖ್ಯೆಯ ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.