Corona 3rd Wave| ಕೊರೋನಾ ಮೂರನೇ ಅಲೆ ಎರಡನೇಯ ಅಲೆಯಷ್ಟು ತೀವ್ರವಾಗಿರಲಾರದು; ICMR ಅಧ್ಯಯನ ಬಹಿರಂಗ
ನವ ದೆಹಲಿ (ಜೂನ್ 27); ಕೊರೋನಾ ಮೂರನೇ ಅಲೆ ಎರಡನೇಯ ಅಲೆಯಷ್ಟು ಹೆಚ್ಚು ತೀವ್ರತೆಯನ್ನು ಹೊಂದಿರಲಾರದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR-Indian Council of Medical Research) ವರದಿ ನೀಡಿದ್ದು, ಜನ ಮತ್ತು ಸರ್ಕಾರ ಇದೀಗ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಕೊರೋನಾ ಎರಡನೇ ಅಲೆ ಭಾರತವನ್ನು ಇನ್ನಿಲ್ಲದಂತೆ ಕಾಡಿತ್ತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಅಸಂಖ್ಯಾತ ಮಕ್ಕಳು ಅನಾಥವಾಗಿವೆ. ಈ ಅಲೆಯನ್ನು ಎದುರಿಸುವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಎರಡನೇ ಅಲೆ ಕ್ರಮೇಣ ಕಡಿಮೆಯಾಗುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಅನ್ಲಾಕ್ ಜಾರಿಯಾಗುತ್ತಿದ್ದು, ಜನ ಜೀವನವೂ ಸಹಜತೆಗೆ ಮರಳುತ್ತಿದೆ.
ಆದರೆ, ಅಷ್ಟರಲ್ಲಾಗಲೆ ಇನ್ನೂ 6 ವಾರದ ಒಳಗಾಗಿ ಭಾರತಕ್ಕೆ ಕೊರೋನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದರು. ಇದು ಸಾಮಾನ್ಯವಾಗಿ ಜನರ ನಡುವೆ ಮತ್ತಷ್ಟು ಭಯದ ವಾತಾವರಣವನ್ನು ಸೃಷ್ಟಿಸಿದ್ದರೆ, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ, ಇದೀಗ ಐಸಿಎಂಆರ್ ಹೊಸ ಸಂಶೋಧನಾ ವರದಿ ನೀಡಿದ್ದು ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ಅಧ್ಯಯನವನ್ನು ಪೀರ್-ರಿವ್ಯೂಡ್ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟಿಸಲಾಗಿದೆ. “ಈ ಅಧ್ಯಯನವು ಗಣನೀಯ ಮೂರನೇ ತರಂಗವು ಸಂಭವಿಸಬಹುದಾದ ತೋರಿಕೆಯ ಕಾರ್ಯವಿಧಾನಗಳನ್ನು ತೋರಿಸುತ್ತದೆ. ಆದರೆ ಅಂತಹ ಯಾವುದೇ ತೀವ್ರತೆಯೂ ಎರಡನೇ ತರಂಗದಷ್ಟು ದೊಡ್ಡದಾಗಿರುವುದು ಅಸಂಭವವಾಗಿದೆ ಎಂದು ಈ ಸಂಶೋಧನೆಯಲ್ಲಿ ವಿವರಿಸಲಾಗಿದೆ” ಎಂದು ಅಧ್ಯಯನವು ತಿಳಿಸಿದೆ. ಆದಾಗ್ಯೂ, ಪ್ರಕ್ಷೇಪಗಳು ಅನಿಶ್ಚಿತತೆಗಳಿಗೆ ಒಳಪಟ್ಟಿವೆ ಮತ್ತು ವ್ಯಾಕ್ಸಿನೇಷನ್‌ಗಳನ್ನು ಹೆಚ್ಚಿಸುವುದು “ಯಾವುದೇ ಸಂಭವನೀಯತೆಯ ವಿರುದ್ಧದ ಹೋರಾಟದ” ಏಕೈಕ ಮಾರ್ಗವಾಗಿದೆ ಎಂದು ಸಂಶೋಧಕರು ಸೂಚಿಸಿದ್ದಾರೆ.
ಈ ನಡುವೆ ಆಸ್ಟ್ರೇಲಿಯಾದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಪರಿಣಾಂ ಸಿಡ್ನಿ, ಸೆಂಟ್ರಲ್ ಕೋಸ್ಟ್, ಬ್ಲೂ ಮೌಂಟೇನ್ಸ್ ಮತ್ತು ವೊಲೊಂಗೊಂಗ್ ಸೇರಿದಂತೆ ಅನೇಕ ಪ್ರದೇಶಗಳು ಜುಲೈ 9 ರವರೆಗೆ ಎರಡು ವಾರಗಳ ಕಾಲ ಕೊರೋನಾ ವೈರಸ್ ಲಾಕ್‌ಡೌನ್ ಅನ್ನು ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪ್ರದೇಶಗಳಲ್ಲೂ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ.
ಶನಿವಾರ ತಮಿಳುನಾಡಿನಲ್ಲೂ 9 ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಇದಲ್ಲದೆ, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದಲ್ಲೂ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಮೂರನೇ ಅಲೆಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.