ಕಾಂಗ್ರೆಸ್‌ನಲ್ಲಿ ಡಿಕೆಶಿ v/s ಸಿದ್ದರಾಮಯ್ಯ: ಪಕ್ಷ ಸಂಘಟನೆಗೆ ಹೊಡೆತ, ಕಾರ್ಯಕರ್ತರಲ್ಲಿ ಭುಗಿಲೆದ್ದ ಅಸಮಾಧಾನ!

ಹೈಲೈಟ್ಸ್‌:

  • ಕಾಂಗ್ರೆಸ್‌ನಲ್ಲಿ ಡಿಕೆಶಿ v/s ಸಿದ್ದರಾಮಯ್ಯ ನಡುವಿನ ಶೀತಲ ಸಮರ
  • ಪಕ್ಷ ಸಂಘಟನೆಗೆ ಹೊಡೆತ ನೀಡುತ್ತಿದ್ದು ಕಾರ್ಯಕರ್ತರಲ್ಲಿ ಅಸಮಾಧಾನ
  • ಆಂತರಿಕವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ ಹಲವು ಮುಖಂಡರು

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಶೀತಲ ಸಮರ ತೀವ್ರಗೊಳ್ಳುತ್ತಿದೆ. ಇಬ್ಬರು ನಾಯಕರ ನಡುವಿನ ಪೈಪೋಟಿ ಇದೀಗ ಪಕ್ಷ ಸಂಘಟನೆಯ ಮೇಲೆ ಹೊಡೆತ ಬಿದ್ದಿದ್ದು ಕಾರ್ಯಕರ್ತರಲ್ಲೂ ಅಸಮಾಧಾನ ಭುಗಿಲೆದ್ದಿದೆ.

ರಾಜ್ಯದಲ್ಲಿ ಕೋವಿಡ್ ಸಂಕಷ್ಟ ನಿರ್ವಹಣೆಯಲ್ಲಿ ಆಡಳಿತ ಪಕ್ಷದ ವೈಫಲ್ಯ, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು, ಸಿಎಂ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಸದ್ಯ ಆಡಳಿತ ವಿರೋಧಿ ಅಲೆಯನ್ನು ಹೆಚ್ಚಿಸಿದೆ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬಹುದಾದ ವಾತಾವರಣ ರಾಜ್ಯದಲ್ಲಿ ಇದೆ.

ಆದರೆ ಇದಕ್ಕೆ ಪೂರಕವಾಗಿರುವ ಕಾರ್ಯಕ್ರಮ ರೂಪಿಸುವ ಬದಲಾಗಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಭವಿಷ್ಯದ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಫೈಟ್ ಕಾರ್ಯಕರ್ತರಲ್ಲೂ ಹಾಗೂ ಮುಖಂಡರಲ್ಲೂ ಅಸಮಾಧಾನವನ್ನು ಮೂಡಿಸಿದೆ. ಹಲವು ಕಾರ್ಯಕರ್ಯರು ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆಂತರಿಕವಾಗಿಯೂ ಕಾರ್ಯಕರ್ತರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದು ಪಕ್ಷ ಸಂಘಟನೆಯ ಮೇಲೂ ಈ ಕಿತ್ತಾಟ ಪ್ರಭಾವ ಬೀರುತ್ತಿದೆ. ಸದ್ಯ ಕೆಪಿಸಿಸಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಇದು ಪಕ್ಷದ ಆಂತರಿಕ ಕಚ್ಚಾಟದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೋದಲ್ಲೆಲ್ಲಾ ಇವರೇ ನಮ್ಮ ಸಿಎಂ ಎಂಬ ಘೋಷಣೆಗಳೇ ರಾರಾಜಿಸುತ್ತಿವೆ. ಇದು ಕಾಂಗ್ರೆಸ್ ಬಣ ರಾಜಕೀಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರಣವಾಗಲಿದೆ ಎಂಬುವುದು ಹಲವರು ಅಭಿಪ್ರಾಯ.

ಕಾಂಗ್ರೆಸ್ ಪಕ್ಷದ ಎರಡನೇ ಹಂತದ ನಾಯಕರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಒಲವು ಇದೆ. ಆದರೆ ಇಲ್ಲೂ ಸಿಎಂ ಸ್ಥಾನಕ್ಕಾಗಿ ಕಚ್ಚಾಟ ನಡೆಯುತ್ತಿದೆ ಎಂಬುವುದು ಜನರಿಗೆ ಮನವರಿಕೆ ಆದಲ್ಲಿ ಅದರಿಂದ ಪಕ್ಷಕ್ಕೆ ಮತ್ತಷ್ಟು ಹಾನಿಯಾಗಲಿದೆ. ಇದು ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂಬುವುದು ಅವರ ಅಭಿಪ್ರಾಯವಾಗಿದೆ.

ಈ ಕಾರಣಕ್ಕಾಗಿಯೇ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಕೂಡಾ ಪಕ್ಷದ ಮುಖಂಡರ ಸಭೆಯಲ್ಲಿ ಸಿಎಂ ಸ್ಥಾನಕ್ಕಾಗಿ ಬಹಿರಂಗವಾಗಿ ನಡೆಯುತ್ತಿರುವ ಫೈಟ್ ನಿಲ್ಲಬೇಕು ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ತಟಸ್ಥ ಬಣ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರು ಮೊದಲ ಆದ್ಯತೆ ಕೊಡಬೇಕು. ನಂತರ ಸಿಎಂ ಸ್ಥಾನದ ವಿಚಾರವಾಗಿ ಚರ್ಚೆ ನಡೆಸಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ನಡುವಿನ ಶೀತಲ ಸಮರ ಪಕ್ಷದ ವರ್ಚಸ್ಸಿಗೆ ಹಾನಿ ಉಂಟು ಮಾಡುತ್ತಿದೆ. ಅಲ್ಲದೆ ಕಾರ್ಯಕರ್ತರಲ್ಲೂ ಸಾಕಷ್ಟು ಗೊಂದಲಕ್ಕೆ, ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂಬುವುದಂತೂ ಸತ್ಯ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *