ಮೆಟ್ರೋ ಕಾಮಗಾರಿಗೆ 2 ದೇಗುಲ ತೆರವು
ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ವೇಗ ನೀಡಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೂ ಒತ್ತು ನೀಡಲಾಗುತ್ತಿದೆ. ಅದರಂತೆ ಬೈಯಪ್ಪನಹಳ್ಳಿ – ವೈಟ್ಫೀಲ್ಡ್ ಮಾರ್ಗದಲ್ಲಿನ ಎರಡು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ.
ನಗರದ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ಸಲುವಾಗಿ ಬಿಎಂಆರ್ಸಿಎಲ್ ಮೆಟ್ರೋ 2ನೇ ಹಂತದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಂತೆ ಈಗಾಗಲೆ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದರಂತೆ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮಾರ್ಗದಲ್ಲಿನ ಜ್ಯೋತಿಪುರ, ಕೆ.ಆರ್. ಪುರ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ. ಅದರ ಜತೆಗೆ ವಿಮಾನನಿಲ್ದಾಣದ ಮಾರ್ಗದ ಕಾಮಗಾರಿಯೂ ಅಲ್ಲಿ ನಡೆಯಲಿದೆ. ಅದಕ್ಕಾಗಿ ಟಿನ್ ಫ್ಯಾಕ್ಟರಿ ಸೇರಿ ಇನ್ನಿತರ ಕಡೆಗಳಲ್ಲಿ 2 ದೇವಾಲಯ ಸೇರಿ 74 ಕಟ್ಟಡಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಅದರಲ್ಲಿ ಈಗಾಗಲೇ 24 ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ.
ಆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಶೀಘ್ರದಲ್ಲಿ ಆರಂಭಿಸಲಾಗುತ್ತಿದೆ. ಉಳಿದ 50 ಕಟ್ಟಡಗಳನ್ನು ವಶಕ್ಕೆ ಪಡೆಯುವ ಕಾರ್ಯಕ್ಕೆ ಬಿಎಂಆರ್ಸಿಎಲ್ ಮುಂದಾಗಿದೆ. ಆ ಕಟ್ಟಡಗಳ ವಶಕ್ಕೆ ಸಂಬಂಧಿಸಿದಂತೆ ಕೆಲವೊಂದು ತೊಡಕುಂಟಾಗಿದ್ದು, ಅದನ್ನು ಬಗೆಹರಿಸಲು ಕಟ್ಟಡ ಮಾಲೀಕರ ಜತೆಗೆ ರ್ಚಚಿಸಲಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
11,200 ಚದರ ಮೀ. ಭೂಮಿ ಬೇಕು: ಕಾಮಗಾರಿಗಾಗಿ 11,200 ಚದರ ಮೀಟರ್ ಭೂಮಿ ಅಗತ್ಯವಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಕಟ್ಟಡಗಳನ್ನು ವಶಕ್ಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತೆರವು ಮಾಡಬೇಕಿರುವ ದೇವಾಲಯಗಳ ಟ್ರಸ್ಟಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತೆರವಿಗೆ ಸಹಕರಿಸುತ್ತಿದ್ದಾರೆ. ದೇವಾಲಯಗಳಿಗೆ ಪರಿಹಾರ ರೂಪದಲ್ಲಿ ಹಣ ಪಾವತಿಸಲಾಗಿದೆ. ಅದರಂತೆ 1,057 ಚದರ ಮೀ. ಭೂಮಿಯಲ್ಲಿನ ಮನೆ ಹಾಗೂ ಮುತ್ಯಾಲಮ್ಮ ದೇವಾಲಯ ವಶಕ್ಕೆ ಪಡೆಯಲಾಗಿದೆ. ಅದಕ್ಕೆ 6.85 ಕೋಟಿ ರೂ. ಪರಿಹಾರ ನೀಡಲಾಗಿದೆ. ಅದೇ ರೀತಿ ಅಲ್ಲಿರುವ ಓಂ ಶಕ್ತಿ ದೇವಾಲಯ ಮತ್ತು ಇತರ ಕಟ್ಟಡಗಳಿರುವ 259.36 ಚದರ ಮೀ. ಭೂಮಿಯನ್ನು ವಶಕ್ಕೆ ಪಡೆಯುವುದು ಬಾಕಿಯಿದೆ. ಅದಕ್ಕಾಗಿ ದೇಗುಲಕ್ಕೆ 2.25 ಕೋಟಿ ರೂ. ಪರಿಹಾರ ನೀಡಲಾಗಿದೆ ಹಾಗೂ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.