Raj Kaushal Dies| ಖ್ಯಾತ ನಟಿ ಮಂದಿರಾ ಬೇಡಿ ಅವರ ಪತಿ ನಿರ್ಮಾಪಕ ರಾಜ್​ ಕೌಶಲ್ ಹೃದಯಾಘಾತದಿಂದ ಸಾವು!

ಮುಂಬೈ (ಜೂನ್ 30); ಖ್ಯಾತ ಬಾಲಿವುಡ್​ ನಟಿ ಹಾಗೂ ಕ್ರಿಕೆಟ್ ವಿಶ್ಲೇಷಕಿ ಮಂದಿರಾ ಬೇಡಿ ಅವರ ಪತಿ ಚಿತ್ರ ನಿರ್ಮಾಪಕ ರಾಜ್​ ಕೌಶಲ್​ ಇಂದು ಬೆಳಗ್ಗೆ 10:09ಕ್ಕೆ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 49 ವರ್ಷದ ರಾಜ್ ಕೌಶಲ್ ಅವರು ತಮ್ಮ ಮನೆಯಲ್ಲಿ ಇಂದು ಮುಂಜಾನೆ 4.30 ರಿಂದಲೇ ಎದೆ ನೋವಿನಿಂದ ಬಳಲುತ್ತಿದ್ದರು, ಆದರೆ, ಯಾವುದೇ ವೈದ್ಯಕೀಯ ಸಹಾಯ ಪಡೆಯುವ ಮೊದಲೇ ನಿಧನರಾದರು ಎಂದು ನಟ ರೋಹಿತ್ ರಾಯ್ ಮಾಹಿತಿ ನೀಡಿದ್ದಾರೆ.

2005 ರಲ್ಲಿ ಬಿಡುಗಡೆಯಾದ ‘ಮೈ ಬ್ರದರ್ ನಿಖಿಲ್’ ಚಿತ್ರದಲ್ಲಿ ರಾಜ್ ಕೌಶಲ್ ಅವರೊಂದಿಗೆ ಕೆಲಸ ಮಾಡಿದ ಚಲನಚಿತ್ರ ನಿರ್ಮಾಪಕ ಓನಿರ್ ಈ ಸುದ್ದಿಯನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಅವರು ತಮ್ಮ ಟ್ವೀಟ್​ನಲ್ಲಿ, ” ನಾವು ಇಂದು ಬೆಳಿಗ್ಗೆ ಚಲನಚಿತ್ರ ನಿರ್ಮಾಪಕ ರಾಜ್ ಕೌಶಲ್ ಅವರನ್ನು ಕಳೆದುಕೊಂಡೆವು. ನನ್ನ ಮೊದಲ ಚಿತ್ರ ಮೈ ಬ್ರದರ್ ನಿಖಿಲ್ ನಿರ್ಮಾಪಕರಲ್ಲಿ ರಾಜ್ ಕೌಶಲ್ ಸಹ ಒಬ್ಬರು. ನಮ್ಮ ಆಲೋಚನೆಗಳನ್ನು ನಂಬಿ ನಮ್ಮನ್ನು ಬೆಂಬಲಿಸಿದ ಕೆಲವರಲ್ಲಿ ಅವರೂ ಒಬ್ಬರು. ಆದರೆ, ಅವರು ಇಂದು ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪ್ರಾರ್ಥಿಸಿದ್ದಾರೆ.

ನಟಿ ಟಿಸ್ಕಾ ಚೋಪ್ರಾ ಟ್ವೀಟ್ ಮೂಲಕ ತನ್ನ ಆಘಾತವನ್ನು ಹೊರಹಾಕಿದ್ದು, “ರಾಜ್ ಕೌಶಲ್ ಕೌಶಲ್ ಇನ್ನು ಮುಂದೆ ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಸುದ್ದಿ ಅಷ್ಟೇ ಆಘಾತಕಾರಿಯಾಗಿದೆ. ಮಂದಿರಾ ಬೇಡಿ ಹಾಗೂ ಅವರ ಇಬ್ಬರು ಮಕ್ಕಳಿಗೆ ನನ್ನ ಸಂತಾಪಗಳು. ರಾಜ್ ಅವರನ್ನು ನಾವು ಮಿಸ್​ ಮಾಡಿಕೊಳ್ಳಲಿದ್ದೇವೆ” ಎಂದು ತಿಳಿಸಿದ್ದಾರೆ.

ಟಿವಿ ನಟ ರೋಹಿತ್ ಬೋಸ್ ರಾಯ್ ಟ್ವೀಟ್ ಮಾಡಿ, “ಇದು ನಂಬಲಾಗದ ಸುದ್ದಿ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಮಂದಿರಾ ಬೇಡಿ ಮತ್ತು ರಾಜ್ ಕೌಶಲ್ ಅವರು 1999 ರಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ 2011 ರಲ್ಲಿ ಮಗ ವೀರ್ ಜನಿಸಿದ್ದ. ಅಲ್ಲದೆ, ಈ ಜೋಡಿ ಕಳೆದ ವರ್ಷ ಜುಲೈನಲ್ಲಿ 4 ವರ್ಷದ ತಾರಾ ಎಂಬ ಮಗಳನ್ನು ದತ್ತು ಪಡೆಯುವುದಾಗಿ ಘೋಷಿಸಿದ್ದರು. ಆದರೆ, ಇದೀಗ ರಾಜ್ ಕೌಶಲ್ ಹೃದಯಾಘಾತಕ್ಕೆ ಬಲಿಯಾಗಿರುವುದು ಇಡೀ ಕುಟುಂಬಕ್ಕೆ ಆಘಾತವಾಗಿದೆ.

ಚಲನಚಿತ್ರ ನಿರ್ಮಾಪಕರಲ್ಲದೆ, ರಾಜ್ ಕೌಶಲ್ ಅವರು ಬರಹಗಾರ ಮತ್ತು ನಿರ್ದೇಶಕರಾಗಿಯೂ ಬಾಲಿವುಡ್​ನಲ್ಲಿ ಕೆಲಸ ಮಾಡಿದ್ದಾರೆ. ಪ್ಯಾರ್ ಮೇನ್ ಕಭಿ ಕಭಿ, ಶಾದಿ ಕಾ ಲಡೂಂಡ್ ಮತ್ತು ಆಂಥೋನಿ ಕೌನ್ ಹೈ ಮುಂತಾದ ಚಿತ್ರಗಳಿಗೆ ಅವರು ಬರಹಗಾರರಾಗಿ ಕೆಲಸ ಮಾಡಿ ಹೆಸರು ಗಳಿಸಿದ್ದರು. 1998 ರಲ್ಲಿ ತಮ್ಮದೇ ಆದ ಜಾಹೀರಾತು ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದ ರಾಜ್ ಕೌಶಲ್, 800 ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ. ಅವರು 2005 ರಲ್ಲಿ “ಮೈ ಬ್ರದರ್ ನಿಖಿಲ್” ಎಂಬ ಯಶಸ್ವಿ ಚಿತ್ರವನ್ನೂ ಸಹ ಅವರು ನಿರ್ಮಿಸಿದ್ದರು. ಹೀಗೆ ಬಾಲಿವುಡ್​ನಲ್ಲಿ ಬಹುಮುಖ ಪ್ರತಿಭೆಯಾಗಿದ್ದ ರಾಜ್ ಕೌಶಲ್ ಅಗಲಿಕೆಗೆ ಇಡೀ ಬಾಲಿವುಡ್​ ಗಣ್ಯರು ಕಂಬನಿ ಮಿಡಿದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *