CoronaVirus| ರಾಜ್ಯಕ್ಕೆ ಪ್ರವೇಶಿಸುವ ಮಹಾರಾಷ್ಟ್ರ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್-ಲಸಿಕೆ ಪ್ರಮಾಣಪತ್ರ ಕಡ್ಡಾಯ
ಬೆಂಗಳೂರು (ಜೂನ್ 30); ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 3,222 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದರೆ, 93 ಜನ ಕೊರೋನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಪಾಸಿಟಿವ್ ಸೋಂಕುಗಳ ಸಂಖ್ಯೆ 28,40,428ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 85,997 ಇದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಈ ನಡುವೆ ಚೇತರಿಕೆಯ ಪ್ರಮಾಣವೂ ಅಧಿಕವಾಗುತ್ತಿದೆ. ಮಂಗಳವಾರವೂ ಸಹ 10,722 ಜನ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕಾರಾತ್ಮಕ ದರವು ಶೇ.2.54ಕ್ಕಿಂತ ಕಡಿಮೆ ಇದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕು ಕ್ರಮೇಣ ಇಳಿಕೆಯಾಗುತ್ತಿ ರುವುದು ಸ್ಪಷ್ಟವಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಅಧಿಕವಾಗುತ್ತಿದ್ದು, ಮಹಾರಾಷ್ಟ್ರದಿಂದ ಯಾರೇ ಪ್ರಯಾಣಿಕರು ರಾಜ್ಯಕ್ಕೆ ಎಂಟ್ರಿಯಾಗಬೇಕು ಎಂದರೆ ಆರ್‌ಟಿ-ಪಿಸಿಆರ್ ನೆಗೆಟೀವ್ ವರದಿ ಅಥವಾ ಕನಿಷ್ಟ ಒಂದು ಡೋಸ್ ಲಸಿಕೆ ಪಡೆಯಬೇಕು ಎಂದು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಜೊತೆಗೆ ಇದೀಗ ಡೆಲ್ಟಾ-ಪ್ಲಸ್ ರೂಪಾಂತರಿ ಸೋಂಕಿನ ಪ್ರಕರಣಗಳೂ ಅಧಿಕವಾಗುತ್ತಿದೆ. ಡೆಲ್ಟಾ ಪ್ಲಸ್ ರೂಪಾಂತರವು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು INSACOG (ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಪೂರ್ಣ ಜೀನೋಮ್ ಅನುಕ್ರಮಣಿಕೆಯ ಪ್ರಯೋಗಾಲಯಗಳ ಒಕ್ಕೂಟ) ತಿಳಿಸಿದೆ. ಇದರ ಬೆನ್ನಿಗೆ ಕರ್ನಾಟಕದಾದ್ಯಂತ ರಾಜ್ಯ ಸರ್ಕಾರ ವಿಶೇಷ ಕಣ್ಗಾವಲು ವಹಿಸಿದೆ.
ಪರಿಣಾಮ ನೆರೆಯ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿ ಅಥವಾ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದ ಪ್ರಕಾರ, ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯು 72 ಗಂಟೆಗಳಿಗಿಂತ ಹಳೆಯದಾಗಿರಬಾರದು ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಕನಿಷ್ಟ ಒಂದು ಡೋಸ್ ಆದರೂ ಪಡೆದಿರಲೇಬೇಕಿದೆ. ವಿಮಾನ, ರೈಲು ಅಥವಾ ರಸ್ತೆ ಮೂಲಕ ಕರ್ನಾಟಕಕ್ಕೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರಿಗೂ ಈ ನಿಯಮ ಅನ್ವಯವಾಗಲಿದೆ.
ಇದಲ್ಲದೆ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಳ್ಳುವ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ಕಲಾಬುರಗಿ, ಬೆಳಗಾವಿ, ವಿಜಯಪುರ ಮತ್ತು ಬೀದರ್ ನಲ್ಲಿ ನಿಯಮವನ್ನು ಜಾರಿಗೆ ತರಲು ಚೆಕ್ ಪೋಸ್ಟ್‌ಗನ್ನು ನಿರ್ಮಿಸಿದ್ದು, ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಆದಾಗ್ಯೂ, ಆರೋಗ್ಯ ಕಾರ್ಯಕರ್ತರು ಮತ್ತು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಒಂದೇ ರೀತಿ ವಿನಾಯಿತಿ ನೀಡಲಾಗಿದೆ.
ಅದೇ ಸಮಯದಲ್ಲಿ, ಕುಟುಂಬದಲ್ಲಿನ ಸಾವು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಭೀಕರ ತುರ್ತು ಸಂದರ್ಭಗಳಲ್ಲಿ, ಪ್ರಯಾಣಿಕರಿಗೆ ಈ ದಾಖಲೆಗಳ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ. ಆದರೆ, ಗುರುತು ಮತ್ತು ವಿಳಾಸದ ವಿವರಗಳನ್ನು ನೀಡುವ ಮೂಲಕ ಕೋವಿಡ್ ಪರೀಕ್ಷೆಗೆ ತಮ್ಮ ಸ್ವ್ಯಾಬ್ ಅನ್ನು ಸಂಗ್ರಹಿಸಿದ ನಂತರವೇ. ಪರೀಕ್ಷಾ ಫಲಿತಾಂಶವನ್ನು ಅವಲಂಬಿಸಿ ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.