10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ : ಡಿಸಿಎಂ
ಬೆಂಗಳೂರು : ಇನ್ನು 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಾಜ್ಯದಲ್ಲಿನ ಆಮ್ಲಜನಕ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವ ಸಂಬಂಧ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ಸಹಕರಿಸಬೇಕು ಎಂದರು.
ಇಂದು 94,000 ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಯಿತು. ರಾಜ್ಯದೆಲ್ಲೆಡೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದ್ದು, ಇನ್ನು ಹತ್ತು ದಿನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೊಮೋ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು ಎಂದು ಹೇಳಿದರು.
ಜೂನ್ ತಿಂಗಳಲ್ಲಿ 60 ಲಕ್ಷ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನು ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದ್ದು, . ಲಸಿಕೆ ಅಭಿಯಾನದಲ್ಲಿ ಇಡೀ ದೇಶದಲ್ಲೇ ರಾಜ್ಯವೂ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಎರಡನೇ ಅಲೆಯ ಸಂಕಷ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಮೂರನೇ ಅಲೆಗೆ ಸರ್ವ ಸನ್ನದ್ಧವಾಗಿದೆ ಸರಕಾರ. ಆಮ್ಲಜನಕ ಕೊರತೆ ಆಗದಂತೆ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ ಗಳಿದ್ದು, ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದ ಅವರು, ತಿಳಿಸಿದರು.