ಡಾಕ್ಯೂಮೆಂಟ್ ಸಿದ್ಧಪಡಿಕೆಗೆ ಆತುರ ಬೇಡ, ಯಾವುದೇ ಕ್ಷೇತ್ರ ಬಿಟ್ಟು ಹೋಗದಂತೆ ಸಮಿತಿ ರಚಿಸಿ ಕಾರ್ಯೋನ್ಮುಖರಾಗಿ -ಸಚಿವ ಮುರುಗೇಶ ಆರ್. ನಿರಾಣಿ
ಕಲಬುರಗಿ,ಜೂ.(ಕ.ವಾ) ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಕೋನದಿಂದ ವಿಜನ್-2050 ಡಾಕ್ಯೂಮೆಂಟ್ ಸಿದ್ದಪಡಿಸಲು ಆತುರ ಮಾಡದೆ ಯಾವುದೇ ಕ್ಷೇತ್ರ ಬಿಟ್ಟು ಹೋಗದಂತೆ ಪ್ರತಿ ಕ್ಷೇತ್ರವಾರು ಸಮಿತಿ ರಚಿಸಿ ಕಾರ್ಯೋನ್ಮುಖರಾಗಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಅರ್. ನಿರಾಣಿ ತಿಳಿಸಿದರು.
ಬುಧವಾರ ಬೆಂಗಳೂರಿನ ವಿಕಾಸಸೌಧದಿಂದ ಕಲಬುರಗಿ ವಿಜನ್-2050 ಕುರಿತಂತೆ ಶಿಕ್ಷಣ ವಿಷಯದ ಕುರಿತು ವಿಡಿಯೋ ಸಂವಾದ ಮೂಲಕ ಶಿಕ್ಷಣ ತಜ್ಞರು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ವಿಜನ್-2050 ಸಂಬಂಧಿಸಿದಂತೆ ಪ್ರಸ್ತುತ 14 ಉಪ ಸಮಿತಿಗಳನ್ನು ರಚಿಸಲಾಗಿದೆ. ಇದರ ಹೊರತಾಗಿ ಯಾವುದೇ ಕ್ಷೇತ್ರಗಳು ಬಿಟ್ಟುಹೋದಲ್ಲಿ ಅದನ್ನು ಪರಿಗಣಿಸಬೇಕು. 30 ವರ್ಷದ ದೀರ್ಘಕಾಲದ ಯೋಜನೆ ಸಿದ್ಧಪಡಿಸಬೇಕಾಗಿರುವುದರಿಂದ ಯವುದೇ ಆತುರ ಬೇಡ. ಇನ್ನು ಸಮಿತಿವಾರು 2-3 ಸಭೆ ನಡೆಸಿ ಪ್ರತಿ ಕ್ಷೇತ್ರದಲ್ಲಿ ನಿವೃತ್ತ ಅಧಿಕಾರಿಗಳು, ತಜ್ಙರ, ಅನುಭವಿಗಳ ಅಭಿಪ್ರಾಯ ಪಡೆಯಿರಿ ಎಂದು ಸಚಿವರು ಅಭಿಪ್ರಾಯಪಟ್ಟರು.
ಮುಂದಿನ ದಿನದಲ್ಲಿ ಪ್ರತಿ ವಾರ ವಿಜನ್-2050ಗೆ ಸಂಬಂಧಿಸಿದಂತೆ ಎರಡೆರಡು ವಿಷಯಗಳ ಕುರಿತು ಸಭೆ ನಡೆಸಿ ತಜ್ಷರ ಸಲಹೆಯನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು ಇನ್ನೂ ಈ ಕುರಿತಂತೆ ಕಲಲಬುರಗಿ ಜಿಲ್ಲಾಡಳಿತ ತುಂಬಾ ಸಕಾರಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿ ಕಾರ್ಯನವಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಮಾತನಾಡಿ ಶರಣರು ಮತ್ತು ಸೂಫಿ-ಸಂತರ ನಾಡಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಹಿಂದುಳಿದ ಪ್ರದೇಶ ಎನ್ನುವ ಕೀಳರಿಮೆ ಹೋಗಲಾಡಿಸಲು ಮಕ್ಕಳಲ್ಲಿ ಪ್ರೇರೇಪಿಸುವ ಕಾರ್ಯಕ್ರಮಗಳು ಹೆಚ್ಚು ಆಯೋಜಿಬೇಕು. ಶಿಕ್ಷಣ ಕ್ಷೇತ್ರ ಸುಧಾರಣೆಗೆ ಮೂಲಸೌಕರ್ಯ ಬಲಪಡಿಸುವ ಯೋಜನೆಗಳು ಹಮ್ಮಿಕೊಳ್ಳಬೇಕು ಎಂದರು.
ಇಲ್ಲಿ ಶಿಕ್ಷಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ. ಶಿಕ್ಷಕರ ನೇಮಕಾತಿಗೆ ಮಾನದಂಡವಾಗಿರುವ ಟಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಅಭ್ಯರ್ಥಿಗಳು ಉತ್ತೀರ್ಣರಾಗುತ್ತಿಲ್ಲ. ಟಿ.ಇ.ಟಿ. ಪರೀಕ್ಷೆ ಉತ್ತೀಣರಾಗುವುದಕ್ಕಾಗಿಯೆ ಒಂದು ತರಬೇತಿ ಕೇಂದ್ರ ಆರಂಭಿಸಬೇಕು ಮತ್ತು ಇದಕ್ಕೆ 10 ನುರಿತ ಶಿಕ್ಷಕರನ್ನು ನಿಯೋಜಿಸಬೇಕು. ಗಣಿತ, ವಿಜ್ಞಾನ ಮತ್ತು ಆಂಗ್ಲ ವಿಷಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಅಂಕಗಳ ಹಿಂದೆ ಮಕ್ಕಳನ್ನು ಓಡಿಸುವುದು ಬೇಡ. ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣದೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಾವು ಶ್ರಮಿಸಬೇಕಿದೆ. ಇದಕ್ಕಾಗಿ ಶಿಕ್ಷಕರು ಮತ್ತು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕವಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ವಿಶೇಷವಾಗಿ ಶಿಕ್ಷಕರಿಗೆ ವಿಷಯವಾರು ಬೋಧನಾ ವಿಧಾನಗಳ ಬಗ್ಗೆ ನಿರಂತರ ತರಬೇತಿ ನಡೆಯಬೇಕಿದೆ ಎಂದು ಡಾ. ಗುರುರಾಜ ಕರಜಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಐ.ಎ.ಎಸ್.ಅಧಿಕಾರಿ ಕೆ.ಎಂ. ಜಾನಕಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಿರುವ ಮೂಲಸೌಕರ್ಯಗಳನ್ನೇ ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಜಿಲಾ ಮಟ್ಟದ ಅಧಿಕಾರಿಗಳಿಗೆ ಶಾಲಾಭಿವೃದ್ಧಿಯ ಸಾಮಾಜಿಕ ಹೊಣೆಗಾರಿಕೆ ನೀಡಬೇಕು. ಒಟ್ಟಿನಲ್ಲಿ ನಿಸ್ವಾರ್ಥವಾಗಿ ಒಂದು ತಂಡವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಸಾಧ್ಯ ಎಂದರು.
ಹಿಂದೆ ತಾವು 2017-18ರಲ್ಲಿ ಹಾಸನ ಜಿಲ್ಲಾ ಪಂಚಾಯತಿಯ ಸಿ.ಇ.ಓ ಆಗಿದ್ದಾಗಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಪಟ್ಟಿ ಮಾಡಿ ಅಂತಹ ಶಾಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಿ ವಿಶೇಷ ಕಾರ್ಯಕ್ರಮಗಳು ಹಾಕಿಕೊಂಡಿದ್ದೇವು. ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮೊದಲು ಮಾಡಲಾಯಿತು. ಆಕಾಶವಾಣಿಯಲ್ಲಿ ಫೋನ್-ಇನ್ ಕಾರ್ಯಕ್ರಮ ನಡೆಸಿ ಮಕ್ಕಳು ಮತ್ತು ಶಾಲೆಗಳ ಸಮಸ್ಯೆಗಳಿಗೆ ಪರಿಹಾರ ನೀಡಲಾಯಿತು. ವಾಟ್ಸ್ಯಾಪ್ ಗ್ರೂಪ್ ಮಾಡಿ ವಿಷಯಗಳ ಹಂಚುವಿಕೆ, ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಲಾಗುತ್ತಿತ್ತು. ಹೀಗೆ ಅನೇಕ ಕಾರ್ಯಕ್ರಮಗಳ ಫಲವಾಗಿ ಹಾಸನ ಜಿಲ್ಲೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ ನಂ-1 ಸ್ಥಾನ ಬರಲು ಸಾಧ್ಯವಾಯಿತು ಎಂದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ವಿಜನ್-2050 ಕುರಿತಂತೆ ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ನೀರಾವರಿ, ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೌಶಲ್ಯಾಭಿವೃದ್ಧಿ ಹೀಗೆ ಒಟ್ಟು 14 ಉಪ ಸಮಿತಿಗಳನ್ನು ರಚಿಸಿ ಆರಂಭಿಕ ಸಭೆ ಸಹ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಸಾಕಷ್ಟು ಮೂಲಸೌಕರ್ಯಗಳಿದ್ದು, ಇದರ ಸದ್ಬಳಕೆಗೆ ಯೋಜನೆ ರೂಪಿಸಬೇಕಿದೆ. “ಎಜುಕೇಷನ್ ಹಬ್” ಆಗುವ ಎಲ್ಲಾ ಅರ್ಹತೆ ಕಲಬುರಗಿ ಹೊಂದಿದೆ. ಐ.ಎ.ಎಸ್., ಐ.ಪಿ.ಎಸ್. ಸೇರಿದಂತೆ ನಾಗರಿಕ ಸೇವೆಗಳ ಪರೀಕ್ಷೆಗೆ ಸ್ಥಳೀಯ ಅಭ್ಯರ್ಥಿಗಳು ದೂರದ ಬೆಂಗಳೂರು, ದೆಹಲಿ, ಹೈದ್ರಾಬಾದ ಹೋಗುವುದನ್ನು ತಪ್ಪಿಸಲು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಷ್ ಶಶಿ ಮಾತನಾಡಿ ಶಿಕ್ಷಣ ಕ್ಷೇತ್ರ ಸುಧಾರಣೆ ನಿಟ್ಟಿನಲ್ಲಿ ಮುಂದಿನ 5 ವರ್ಷದಲ್ಲಿ ಶಾಲೆಗಳಲ್ಲಿ ಕುಡಯುವ ನೀರು ಮತ್ತು ಶೌಚಾಲಯಗಳು ಒಳಗೊಂಡಂತೆ ಮೂಲಭೂತ ಸೌಕರ್ಯ ಒದಗಿಸುವುದು, ಆಟದ ಮೈದಾನ ಹೀಗೆ ಹಂತ ಹಂತವಾಗಿ ಕಾಲಮಿತಿಯಲ್ಲಿ ಆಗಬೇಕಿದೆ. ಜೊತೆಗೆ ಶಿಕ್ಷಕರ ನೇಮಕಾತಿಗೂ ಚಾಲನೆ ನೀಡಬೇಕಿದೆ ಎಂದರು.
ಡಿಡಿಪಿಐ ಅಶೋಕ ಭಜಂತ್ರಿ ಅವರು ಮಾತನಾಡಿ, ಕಳೆದ 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 28ನೇ ಸ್ಥಾನದಿಂದ 22ನೇ ಸ್ಥಾನಕ್ಕೇರಿದ್ದು, ಶೇ.74.39ರಷ್ಟು ಫಲಿತಾಂಶ ಬಂದಿದೆ. ಕೋವಿಡ್ ಹಿನ್ನೆಲೆ ಭೌತಿಕವಾಗಿ ತರಗತಿಗಳು ಶುರುವಾಗದ ಕಾರಣ ಗ್ರಾಮೀಣ ಭಾಗದ ಮಕ್ಕಳಿಗೆ ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳುವಿಕೆ ಕಷ್ಟವಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನೊಂದಿಗೆ ಜಿಲ್ಲೆಯನ್ನು ಟಾಪ್ 10ರಲ್ಲಿ ಕೊಂಡೊಯ್ಯುವ ವಿಶ್ವಾಸವಿದ್ದು, ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ 2020-21 ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಜುಲೈ 19 ಹಾಗೂ 22 ರಂದು ನಡೆಯಲ್ಲಿದ್ದು, ಜಿಲ್ಲೆಯಲ್ಲಿ 45335 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್ ಮಾರ್ಗಸೂಚಿಯೊಂದಿಗೆ ಪರೀಕ್ಷೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
3ನೇ ಅಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ: ಸಂಭಾವ್ಯ ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯ ಗಡಿ ಭಾಗದಲ್ಲಿ 5 ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಇದರಲ್ಲಿ ಮಹಾರಾಷ್ಟçಕ್ಕೆ ಹೊಂದಿಕೊಂಡಿರುವ ಖಜೂರಿ ಮತ್ತು ಹೀರೊಳ್ಳಿಯಲ್ಲಿ ಕಳೆದ 72 ಗಂಟೆಯಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ. ಇನ್ನೂ ಗಡಿಗೆ ಹೊಂದಿಕೊಂಡ 15 ಕಿ.ಮಿ. ಪ್ರದೇಶದ ಹಳ್ಳಿಗಳಲ್ಲಿ ಕೋವಿಡ್ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಲಾಕ್ ಡೌನ್ ತೆರವುಗೊಳಿಸಿದ ನಂತರ ಕಳೆದ ಒಂದು ವಾರದಲ್ಲಿ ನಿಧಾನಗತಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಏರುತ್ತಿದೆ. ಇದೂ ಹಿಂದಿನ ೪ ವಾರಕ್ಕೆ ಹೋಲಿಸಿದಾಗ ತುಸು ಜಾಸ್ತಿಯಾಗಿದೆ. ಪ್ರತಿದಿನ 14 ರಿಂದ 15 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದು, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ. ಈಗಾಗಲೇ 4.4 ಲಕ್ಷ ಜನರು ಮೊದಲ ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರೆ ಎರಡನೇ ಡೋಸ್ ಪಡೆದುಕೊಂಡವರ ಸಂಖ್ಯೆ 81 ಸಾವಿರ ಮೀರಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಡಾ.ಅಜಯ ಸಿಂಗ್, ಎಂ.ಎಲ್.ಸಿ. ಶಶಿಲ್ ನಮೋಶಿ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್.ರವಿಕುಮಾರ ಅವರು ಸಹ ಮಾತನಾಡಿದರು.
ವಿಡಿಯೋ ಸಂವಾದದಲ್ಲಿ ಸಂಸದ ಡಾ.ಉಮೇಶ ಜಾಧವ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಎಂ.ವೈ. ಪಾಟೀಲ್, ಸುಭಾಷ ಗುತ್ತೇದಾರ್, ಕನೀಜ್ ಫಾತಿಮಾ, ಡಾ. ಅವಿನಾಶ್ ಜಾಧವ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕ ಸುನೀಲ್ ವಲ್ಯಾಪುರೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.