ನಾವು ಒಕ್ಕಲಿಗರೇ, ನಾವು ಹಳ್ಳಿಯಲ್ಲಿ ಹುಟ್ಟಿದ್ದೇವೆ ಅಷ್ಟೇ: ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

ಹೈಲೈಟ್ಸ್‌:

  • ಕುಮಾರಸ್ವಾಮಿಗಿಂತಲೂ ಹೆಚ್ಚಿನ ಗೌರವವನ್ನು ದೇವೇಗೌಡರಿಗೆ ನಾನು ಕೊಡುತ್ತೇನೆ
  • ಎರಡು ಬಾರಿ ಸಿಎಂ ಆಗಿದ್ದವರು ಆಡುವ ಮಾತುಗಳೇ ಇವು?
  • ರಾಜಕೀಯವಾಗಿ ನನಗೆ ಕಣ್ಣಲ್ಲಿ ನೀರು ಬಂದಿಲ್ಲ, ರಕ್ತ ಬಂದಿದೆ
  • ನಾವು ರಾಜಕಾರಣ ಮಾಡುವುದರಿಂದ ನಿಮಗೇನು ತೊಂದರೆ
  • ಹೋದ ಕಡೆಯೆಲ್ಲ ಇದು ನನ್ನ ಕರ್ಮಭೂಮಿ ಎನ್ನುತ್ತೀರಿ, ಆದರೆ ನನಗೆ ಇರುವುದು ಮಂಡ್ಯ ಮಾತ್ರ

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಜೆಡಿಎಸ್ ನಾಯಕರು ತಮ್ಮ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಕುಮಾರಸ್ವಾಮಿ ಹಾಗೂ ಇತರೆ ಜೆಡಿಎಸ್ ಮುಖಂಡರ ವಿರುದ್ಧ ಕಿಡಿಕಾರಿದರು. ‘ನನ್ನ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡೋದು ಸರಿಯಲ್ಲಾ. ದೇವೆಗೌಡರಿಗೆ ನಾನು ಕುಮಾರಸ್ವಾಮಿಗಿಂತಲೂ ಹೆಚ್ಚಿನ ಗೌರವ ಕೊಡ್ತೀನಿ. ಇವರೇನಾದ್ರೂ ನನ್ನ ಜೊತೆ ಚರ್ಚೆ ಮಾಡುವುದಾದರೆ ಬರಲಿ. ನಾನು ಎಷ್ಟು ಗೌರವ ಕೊಟ್ಟಿದ್ದೇನೆ, ಇವರು ಯಾವ ಯಾವ ಸಮಯದಲ್ಲಿ ಏನೇನು ಮಾತನಾಡಿದ್ದಾರೆ ಹೇಳ್ತೀನಿ. ಅದೆಲ್ಲಾ ನನಗೆ ತುಂಬಾ ವೈಯಕ್ತಿಕವಾಗಿ ಗೊತ್ತು. ಅದನ್ನೆಲ್ಲಾ ಈಗ ಹೇಳೋಕೆ ಹೋಗಲ್ಲ’ ಎಂದು ಹೇಳಿದರು.

‘ನನಗೆ ದೇವೆಗೌಡರು ತಂದೆ ಅಲ್ಲದಿದ್ದರೂ ತಂದೆ ಸ್ಥಾನದಲ್ಲೇ ನೋಡ್ತೀನಿ. ನನ್ನ ಮನೆ ಗೃಹ ಪ್ರವೇಶ ಪೂಜೆಯನ್ನು ನನ್ನ ಸಹೋದರನ ಕೈಲಿ ಮಾಡಿಸದೆ ದೇವೆಗೌಡ ಮತ್ತು ಚೆನ್ನಮ್ಮ ಅವರ ಕೈಯಲ್ಲಿ ಮಾಡಿಸಿದ್ದೆ. ಇವರ ಗೃಹಪ್ರವೇಶವನ್ನು ಹಾಗೆ ಮಾಡಿಸಿದ್ದರೋ ಏನೋ ಗೊತ್ತಿಲ್ಲ. ನಾವು ಹಿರಿಯರಿಗೆ ಕೊಡುವ ಗೌರವ ಇದು’ ಎಂದು ವಾಗ್ದಾಳಿ‌ ನಡೆಸಿದರು.

ಮಂಡ್ಯ ಮನ್ನುಲ್ ಹಗರಣ ವಿಚಾರ ಪ್ರಸ್ತಾಪಿಸಿದ ಚಲುವರಾಯಸ್ವಾಮಿ, ‘ಬೆಂಗಳೂರು ಡೈರಿಯಲ್ಲಿ ಬ್ಲಾಕ್‌ ಲಿಸ್ಟ್‌ನಲ್ಲಿರುವವರಿಗೆ ಇಲ್ಲಿನ ಆಡಳಿತ ಮಂಡಳಿ ಹಾಲು ಸರಬರಾಜು ವಾಹನಗಳಿಗೆ ಗುತ್ತಿಗೆ ನೀಡಿದೆ. ಬ್ಲಾಕ್‌‌ಲಿಸ್ಟ್‌ನಲ್ಲಿರುವ ಗುತ್ತಿಗೆ ನೀಡುವುದರಲ್ಲಿ ಆಡಳಿತ ಮಂಡಳಿ ಕೈ ಜೋಡಿಸಿದೆ‌. ಪದೇ ಪದೇ ಜೆಡಿಎಸ್ ನಾಯಕರು ನನ್ನ ವಿರುದ್ದ ಆರೋಪ ಮಾಡ್ತಿದ್ದಾರೆ. 70 ಕೋಟಿ ಹಗರಣ ಕಂಡುಬಂದಾಗ ನಾವೇ ಅದನ್ನು ಸೂಪರ್ ಸೀಡ್ ಮಾಡಿದ್ದೆವು. ಆದ್ರೆ ಚೆಲುವರಾಯಸ್ವಾಮಿ ಸ್ಟೇ ಕೊಡಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಈಗ ಆಗಿರುವ 150-200 ಕೋಟಿ ಹಗರಣಕ್ಕೆ ಸೂಪರ್‌ ಸೀಡ್ ಮಾಡಬೇಡಿ ಎನ್ನುವ ಜೆಡಿಎಸ್ ನಾಯಕರೇ ಇದಕ್ಕೆ ಅರ್ಥ ಹೇಳಬೇಕು. ಚುನಾವಣೆ ಸಮಯದಲ್ಲಿ ಸೂಪರ್ ಸೀಡ್ ಮಾಡಿದಾಗ ನಾನು ಸ್ಟೇ ಕೊಡಿಸಿದ್ದೆ’ ಎಂದರು.

ಅನುಕಂಪ ಗಿಟ್ಟಿಸುವ ಪ್ರಯತ್ನ ಬೇಡ
‘ಎರಡು ಬಾರಿ ಸಿಎಂ ಆದವರು ನನ್ನ ಆಡಿಯೋ ವಿಚಾರದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ‌. ನನ್ನ ಆಡಿಯೋವನ್ನು ತಿರುಚಿ ಎಚ್‌ಡಿಕೆ ಅನುಕಂಪ ಗಿಟ್ಟಿಸಿಕೊಳ್ಳಬಾರದು. ಅವರ ಸಾಧನೆಗಳನ್ನು ಹೇಳಿ ಅನುಕಂಪ ಗಿಟ್ಟಿಸಿಕೊಳ್ಳಲಿ. ನಾವು ಮಂಡ್ಯಕ್ಕೆ ಬರಬೇಡಿ ಅಂತ ಎಲ್ಲೂ ಹೇಳಿಲ್ಲ. ಹಗರಣದ ವಿಚಾರದಲ್ಲಿ ತಲೆಹಾಕಬೇಡಿ ಅಂತ ಚೆನ್ನಪ್ಪ‌ ಹೇಳಿದ್ದಾರೆ. ಚೌಡಯ್ಯ, ಮಾದೇಗೌಡರನ್ನ ನಾವು ಕರೆದಿಲ್ಲ.. ನಾನು ವಿಧಾನಸೌಧ ನೋಡಿದ್ದೇನೆ, ನಾವೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗುತ್ತೇವೆ’ ಎಂದು ಹೇಳಿದರು.

ಹೋದ ಕಡೆಯಲ್ಲ ಇದು ಕರ್ಮಭೂಮಿ ಎನ್ನುತ್ತಾರೆ
‘ಜಮೀರ್ ಬಗ್ಗೆ ನ್ಯೂಸ್‌ ಚಾನೆಲ್‌ನ ಲೈವ್‌ನಲ್ಲಿ ಹೆಚ್ಡಿಕೆ ಅವಹೇಳನ‌ ಮಾಡ್ತಾರೆ. ಎರಡು ಬಾರಿ ಸಿ.ಎಂ ಆದವರು ಆಡುವ ಮಾತಾ ಅದು? ಅಪ್ಪನಿಗೆ ಹುಟ್ಟಿದವರ ಜೊತೆ ಮಾತನಾಡ್ತೀನಿ ಎನ್ನುವುದು ಮಾಜಿ ಸಿ.ಎಂಗೆ ಶೋಭೆ ತರುತ್ತಾ? ಜಮೀರ್‌ಗಲ್ಲದೆ ಇನ್ನು ಎಷ್ಟು ಜನಕ್ಕೆ ಈ ರೀತಿ ಮಾತನಾಡಿದ್ದಾರೋ. ಗೆಲ್ಲಿಸಿದಾಗ ನೀವು ನಮ್ಮವರು ಎನ್ನೋದು, ಸೋಲಿಸಿದಾಗ ನಮ್ಮವರಲ್ಲ ಅನ್ನೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು

‘ಮಗ ನಿಖಿಲ್ ಸೋಲುತ್ತಿದ್ದಂತೆ ಕೆಆರ್‌ಎಸ್ ಜಲಾಶಯದ ಕೀ ನನ್ನ ಬಳಿ ಇಲ್ಲ, ಡೆಲ್ಲಿಗೆ ಹೋಗಿ ಅಂತಾರೆ. ನನಗೆ ನನ್ನ ಜಿಲ್ಲೆ ಎನ್ನಲು ಇರುವುದು ಮಂಡ್ಯ ಒಂದೇ. ಅವರಿಗೆ ಇಡೀ ದೇಶವೇ ಇದೆ. ನಾನು ನಮ್ಮ ದೇಶ, ನಮ್ಮ ರಾಜ್ಯ ಎನ್ನಬಹುದು. ಆದ್ರೆ ನನ್ನ ಜಿಲ್ಲೆ ಎನ್ನಲು ಮಂಡ್ಯವೊಂದೇ, ನನ್ನ ಕರ್ಮಭೂಮಿ ಮಂಡ್ಯ ಜಿಲ್ಲೆ. ನಾನು ಹೋದ ಹೋದ ಕಡೆಯೆಲ್ಲ ಇದು ನನ್ನ ಕರ್ಮ ಭೂಮಿ ಅಂತ ಹೇಳಲ್ಲ.ನಾವು ಅಖಂಡ ಭಾರತವನ್ನು ಪ್ರತಿನಿಧಿಸುತ್ತೇವೆ. ಆದ್ರೆ ರಾಜಕಾರಣ ಬಂದಾಗ ಮಂಡ್ಯ ಮಾತ್ರ ಕರ್ಮಭೂಮಿ’ ಎಂದು ವ್ಯಂಗ್ಯವಾಡಿದರು.

ಗೆಸ್ಟ್ ಹೌಸ್ ಮಾತುಕತೆ ಬಗ್ಗೆ ಎಚ್‌ಡಿಕೆಯೇ ಹೇಳಲಿ
‘ನಾನು ಕುಮಾರಸ್ವಾಮಿ ಜತೆ ಯಾವುದೇ ವ್ಯವಹಾರ ಮಾಡಿಲ್ಲ‌. ರಾಜಕೀಯವಾಗಿ ಏನಾದ್ರೂ ಆಗಿದ್ರೆ ಬಹಿರಂಗ ಚರ್ಚೆಗೆ ಸಿದ್ದ. ಅವರ ಆತ್ಮೀಯರಾದ ಸಾ.ರಾ.ಮಹೇಶ್ , ಪುಟ್ಟರಾಜು ಅವರನ್ನೂ ಕರೆದುಕೊಂಡು ಬರಲಿ. ನಾನು, ಮಾಗಡಿ ಬಾಲಕೃಷ್ಣ ಇಬ್ಬರೇ‌ ಹೋಗ್ತೀವಿ’ ಎಂದು ಸವಾಲು ಹಾಕಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *