ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ಹೋಗಿ 3.5 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಉದ್ಯಮಿ

ಹೈಲೈಟ್ಸ್‌:

  • ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು 3.5 ಕೋಟಿ ರೂ ರವಾನಿಸಿದ್ದ ಉದ್ಯಮಿ
  • ಕ್ರಿಪ್ಟೋಕರೆನ್ಸಿಯ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದಿದ್ದರೂ ಲಾಭ ಗಳಿಸಿದ್ದ ಸ್ನೇಹಿತ
  • ಸ್ನೇಹಿತನ ಗೆಳೆಯನನ್ನು ನಂಬಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ

ಬೆಂಗಳೂರು: ಜಗತ್ತಿನಾದ್ಯಂತ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ವ್ಯವಹಾರಗಳು ಬೆಳೆಯುತ್ತಿವೆ. ಅನೇಕರು ತಮ್ಮ ದುಡಿಮೆ, ಉಳಿತಾಯ, ಹಾಗೂ ಹೂಡಿಕೆಯ ಮೂಲವನ್ನಾಗಿ ಕ್ರಿಪ್ಟೋಕರೆನ್ಸಿಗಳನ್ನು ಬಳಸುತ್ತಿದ್ದಾರೆ. ಅದರ ಬೆನ್ನಲ್ಲೇ ಬೃಹತ್ ಸೈಬರ್ ವಂಚನೆ ಪ್ರಕರಣಗಳೂ ದಾಖಲಾಗುತ್ತಿವೆ.

ಬೆಂಗಳೂರಿನ ಜೆಪಿ ನಗರದ 37 ವರ್ಷದ ಉದ್ಯಮಿಯೊಬ್ಬರು ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ವಂಚಕನೊಬ್ಬನನ್ನು ನಂಬಿ 3.5 ಕೋಟಿ ರೂ ಕಳೆದುಕೊಂಡಿದ್ದಾರೆ. ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಹಾಯಮಾಡುವುದಾಗಿ ಭರವಸೆ ನೀಡಿದ್ದ ಸೈಬರ್ ವಂಚಕನೊಬ್ಬ 3.5 ಕೋಟಿ ರೂ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದ ತಮ್ಮ ಸ್ನೇಹಿತ ರಮೇಶ್ ಟಿವಿ ಅವರು ಲಾಭ ಗಳಿಸಿದ್ದರು ಎಂದು ಉದ್ಯಮಿ ಗೌತಮ್ ತಿಳಿಸಿದ್ದಾರೆ. ಈ ವ್ಯವಹಾರದ ಬಗ್ಗೆ ತಮಗೆ ಸಾಕಷ್ಟು ತಿಳಿವಳಿಕೆ ಇಲ್ಲ. ಆದರೆ ಸ್ನೇಹಿತ ಕುನಾಲ್ ಅನೂರ್ ಚಂದರನಾ ಎಂಬಾತನ ಮೂಲಕ ಹೂಡಿಕೆ ಮಾಡಿದ್ದಾಗಿ ಗೌತಮ್ ಅವರಿಗೆ ರಮೇಶ್ ಹೇಳಿದ್ದರು.

ರಮೇಶ್ ಸಂಪರ್ಕದಿಂದ ಚಂದರನಾನನ್ನು ಭೇಟಿ ಮಾಡಿದ್ದ ಗೌತಮ್, ಆತನ ಸಲಹೆಯಂತೆ ಮೇ 15ರಂದು ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಎರಡು ಬ್ಯಾಂಕ್ ಖಾತೆಗಳಿಗೆ ಒಟ್ಟು 3.5 ಕೋಟಿ ರೂ ವರ್ಗಾವಣೆ ಮಾಡಿದ್ದರು.

ಆದರೆ, ಚಂದರನಾ ಕ್ರಿಪ್ಟೋಕರೆನ್ಸಿ ವ್ಯವಸ್ಥೆ ಮಾಡಿರಲಿಲ್ಲ. ತನಗೆ ನೀಡಿದ್ದ ಹಣವನ್ನೂ ವಾಪಸ್ ನೀಡಲಿಲ್ಲ. ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಇದರಿಂದ ಕಂಗಾಲಾದ ಗೌತಮ್ ಅವರು ದಕ್ಷಿಣ ವಿಭಾಗದ ಸಿಇಎನ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *