ಮರಳಿ ಗೂಡು ಸೇರುತ್ತಾರಾ ವಲಸಿಗರು? ರಾಜ್ಯ ರಾಜಕಾರಣದಲ್ಲಿ ‘ಗರ್ ವಾಪಸಿ’ ಚರ್ಚೆ
ಹೈಲೈಟ್ಸ್:
- ಕಾಂಗ್ರೆಸ್ ತೊರೆದು ಬಿಜೆಪಿ ಕ್ಯಾಂಪ್ ಸೇರಿದ್ದ ವಲಸಿಗರು ಮತ್ತೆ ಮರಳಿ ಕಾಂಗ್ರೆಸ್‌ಗೆ ವಾಪಸಾಗುತ್ತಾರಾ?
- ರಾಜ್ಯ ರಾಜಕಾರಣದಲ್ಲಿ ತೀವ್ರಗೊಳ್ಳುತ್ತಿರುವ ‘ಗರ್ ವಾಪಸಿ’ ಕುರಿತಾದ ಚರ್ಚೆ
- ಕುತೂಹಲ ಕೆರಳಿಸಿದೆ ವಲಸಿಗರ ನಡೆ, ಪಕ್ಷ ತೊರೆದ ಮಿತ್ರಮಂಡಳಿಯ ಮುಂದಿನ ಹೆಜ್ಜೆ ಏನು
ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಸಿಡಿದೆದ್ದು ಮನೆ ತೊರೆದು ಕಮಲದ ಗೂಡು ಸೇರಿದ ವಲಸಿಗ ಶಾಸಕರು ಮತ್ತೆ ‘ಗರ್ ವಾಪಸಿ’ ಆಗುತ್ತಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಈ ಸಂಗತಿ ಮುನ್ನಲೆಗೆ ಬಂದಿದ್ದು ಕುತೂಹಲ ಕೆರಳಿಸಿದೆ. ಆದರೆ ಈ ಬಗ್ಗೆ ಸದ್ಯ ಬಿಜೆಪಿಯ ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ವಲಸಿಗರು ಮಾತ್ರ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಆಪರೇಷನ್ ಕಮಲದ ಮೂಲಕ 14 ಮಂದಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಈ ಪೈಕಿ ಎಸ್‌ಟಿ ಸೋಮಶೇಖರ್, ಎಂಟಿಬಿ ನಾಗರಾಜ್, ಆರ್. ಮುನಿರತ್ನ, ಡಾ. ಕೆ ಸುಧಾಕರ್ ನಡೆ ಅಚ್ಚರಿಗೆ ಕಾರಣವಾಗಿತ್ತು. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರೆಲ್ಲಾ ರಾತ್ರೋ ರಾತ್ರಿ ಬಿಜೆಪಿ ಕ್ಯಾಂಪ್ ಸೇರಿಕೊಂಡಿದ್ದರು. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ಜೆಡಿಎಸ್ ಪಕ್ಷದ ಮೂವರು ಶಾಸಕರು ಕೈಜೋಡಿಸಿದ್ದರು.
ಈ ಮೂಲಕ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ ಇವರೆಲ್ಲಾ ಸದ್ಯ ಬಿಜೆಪಿಯಲ್ಲಿ ಅಸ್ಥಿತ್ವ ಕಂಡುಕೊಳ್ಳುತ್ತಿದ್ದಾರೆ. ಬಹುತೇಕ ಮಂದಿ ಸಚಿವರು ಆಗಿದ್ದಾರೆ. ಉಳಿದಂತೆ ಎಚ್ ವಿಶ್ವನಾಥ್, ಪ್ರತಾಪಗೌಡ ಪಾಟೀಲ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಸಿ.ಡಿ ಪ್ರಕರಣದಲ್ಲಿ ಸಿಕ್ಕಿಬಿದ್ದ ರಮೇಶ್ ಜಾರಕಿಹೊಳಿಯ ರಾಜಕೀಯ ಜೀವನವೂ ಅತಂತ್ರದಲ್ಲಿದೆ. ಇಂತಹ ಸಂದರ್ಭದಲ್ಲೇ ವಲಸಿಗರ ಗರ್ ವಾಪಸಿ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಗರ್ ವಾಪಸಿ ಸಾಧ್ಯತೆಗಳೆಷ್ಟು?
ಪಕ್ಷದ ವಿರುದ್ಧ ಬಂಡಾಯವೆದ್ದು ಕಮಲ ಪಾಳಯ ಸೇರಿಕೊಂಡಿರುವ 17 ಮಂದಿ ವಲಸಿಗರಲ್ಲಿ ಬಹುತೇಕ ಮಂದಿ ಬಿಎಸ್‌ವೈ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಮಲದ ಮೂಲ ನಿವಾಸಿ ಶ್ರಿರಾಮುಲು ಅವರಲ್ಲಿದ್ದ ಆರೋಗ್ಯ ಖಾತೆಯನ್ನು ಕಿತ್ತು ವಲಸಿಗ ಸುಧಾಕರ್‌ಗೆ ನೀಡಲಾಯಿತು. ಉಳಿದಂತೆ ಇತರರಿಗೆ ತಾವು ಕೇಳಿದ್ದ ಖಾತೆಯನ್ನು ನೀಡಲಾಗಿತ್ತು.ಆದರೆ ವಲಸಿಗರಿಗೆ ಬಿಎಸ್‌ವೈ ಸರ್ಕಾರಕ್ಕೆ ಸಿಕ್ಕ ಆದ್ಯತೆ ಮೂಲ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂಬುವುದು ಸತ್ಯ.
ಈ ನಿಟ್ಟಿನಲ್ಲಿ ಬಿಜೆಪಿ ಕ್ಯಾಂಪ್‌ನಲ್ಲಿ ವಲಸಿಗರ ಬಗ್ಗೆ ಆಂತರಿಕವಾಗಿಯೇ ಅಸಮಾಧಾನವಿದೆ. ಪದೇ ಪದೇ ಇದು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಲೂ ಇದೆ. ಸಚಿವರ ನಡುವಿನ ಸಮನ್ವಯದ ಕೊರತೆಯಿಂದ ಸರ್ಕಾರದ ಕೆಲಸ ಕಾರ್ಯಗಳಿಗೆ ಹಿನ್ನಡೆ ಆದ ಉದಾಹರಣೆಗಳು ಸಾಕಷ್ಟಿವೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಸ್ವತಃ ಬಿಜೆಪಿ ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ವಲಸಿಗರು ಬಂದ ಬಳಿಕ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದರು. ಆದರೆ ಬಳಿಕ ಅದನ್ನು ನಿರಾಕರಣೆ ಮಾಡಿದ್ದರು. ಇಂತಹ ಬೆಳವಣಿಗೆಗಳು ಸಹಜವಾಗಿ ವಲಸಿಗರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗುತ್ತಿದೆ.
ಪ್ರತ್ಯೇಕ ಸಭೆ ನಡೆಸಿದ್ದ ವಲಸಿಗರ ಟೀಂ
ಬಿಜೆಪಿಯಲ್ಲಿ ತಲೆಧೋರಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಭಿನ್ನ ನಿಲುವುಗಳು ಇವೆ. ಆದರೆ ಎಚ್ ವಿಶ್ವನಾಥ್ ಹೊರತಾಗಿ ಉಳಿದೆಲ್ಲಾ ವಲಸಿಗರು ಬಿಎಸ್‌ವೈ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಲು ರಾಜ್ಯಕ್ಕೆ ಅರುಣ್ ಸಿಂಗ್ ಆಗಮಿಸಿದ್ದಾಗ ವಲಸಿಗರು ಬಿಎಸ್‌ವೈ ಪರವಾಗಿಯೇ ಧ್ವನಿ ಎತ್ತಿದ್ದರು. ಅಲ್ಲದೆ ವಿಧಾನಸೌಧದಲ್ಲಿ ಪ್ರತ್ಯೇಕವಾಗಿ ಸುಧಾಕರ್, ಬಿಸಿ ಪಾಟೀಲ್, ಎಸ್‌ಟಿ ಸೋಮಶೇಖರ್, ಬೈರತಿ ಬಸವರಾಜ ಸಭೆ ನಡೆಸಿದ್ದರು. ಅರುಣ್ ಸಿಂಗ್ ಆಗಮನದ ಸಂದರ್ಭದಲ್ಲಿ ವಲಸಿಗ ಕ್ಯಾಂಪ್‌ನ ಕೆಲವು ಸಚಿವರ ಸಭೆ ಕುತೂಹಲಕ್ಕೆ ಕಾರಣವಾಗಿತ್ತು.
ಈ ನಡುವೆ ಸಿ.ಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಇದಕ್ಕೆ ಕೆಲವು ಬಿಜೆಪಿ ಮುಖಂಡರು ಕಾರಣ ಎಂಬ ಅಸಮಾಧಾನ ಜಾರಕಿಹೊಳಿಗಿದೆ. ಪರೋಕ್ಷವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಬೆದರಿಕೆಯನ್ನು ರಮೇಶ್ ಹಾಕಿದ್ದಾರೆ. ಈ ಎಲ್ಲ ವಿಚಾರಗಳು ವಲಸಿಗರ ಕ್ಯಾಂಪ್ ಬಗ್ಗೆ ಅನುಮಾನ ಮೂಡಿಸುತ್ತಿದೆ. ಇದರ ಬೆನ್ನಲ್ಲೆ ಡಿಕೆ ಶಿವಕುಮಾರ್ ಅವರು ವಲಸಿಗರು ಮತ್ತೆ ಪಕ್ಷಕ್ಕೆ ಬಂದರೆ ಸ್ವಾಗತ ಎಂಬ ಅರ್ಥದ ಹೇಳಿಕೆ ನೀಡಿರುವುದು ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಯಾರು ಪಕ್ಷ ಬಿಡುತ್ತಾರೋ ಯಾರು ಸೇರುತ್ತಾರೋ ಹೇಳಲು ಅಸಾಧ್ಯ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.