Namma Metro: ಇಂದಿನಿಂದ ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ; ಆದರೆ, ರೈಲು ಹತ್ತುವ ಮುನ್ನ ಈ ಅಂಶಗಳು ನೆನಪಿನಲ್ಲಿರಲಿ

ಬೆಂಗಳೂರು: ಕೊರೊನಾ ಲಾಕ್​ಡೌನ್​ ಸಡಿಲಗೊಂಡು ಅನ್​ಲಾಕ್​ 3.0 ಜಾರಿಯಾಗುತ್ತಿರುವ ಕಾರಣ, ನಮ್ಮ ಮೆಟ್ರೋ ಸಂಚಾರಕ್ಕೆ ವಾರಪೂರ್ತಿ ಅವಕಾಶ ಕಲ್ಪಿಸಲಾಗಿದೆ. ಎರಡನೇ ಅಲೆ ಕಾರಣದಿಂದ ವ್ಯತ್ಯಯಗೊಂಡು ನಿಗದಿತ ವೇಳೆಯಲ್ಲಿ ಆರಂಭಗೊಂಡಿದ್ದ ನಮ್ಮ ಮೆಟ್ರೋ ಸಂಚಾರದ ಅವಧಿಯನ್ನು ಕಳೆದವಾರವಷ್ಟೇ ಕೊಂಚ ವಿಸ್ತರಿಸಲಾಗಿತ್ತು. ಅದನ್ನೀಗ ಮತ್ತೊಮ್ಮೆ ಸಡಿಲಿಸಲಾಗಿದ್ದು ವಾರದ ಏಳು ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ಹಸಿರು, ನೇರಳೆ ಎರಡೂ ಮಾರ್ಗದಲ್ಲಿ ರಾತ್ರಿ 8ರವರೆಗೆ ಸೇವೆ ಒದಗಿಸುವುದಾಗಿ ಬಿಎಂಆರ್​ಸಿಎಲ್​ (BMRCL) ಮಾಹಿತಿ ನೀಡಿದೆ.

ಜುಲೈ 1 ರಿಂದ ನಮ್ಮ ಮೆಟ್ರೋ ಸೋಮವಾರದಿಂದ ಶುಕ್ರವಾರದವರೆಗೆ ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್​ ಕಳೆದ ವಾರ ತಿಳಿಸಿತ್ತು. ಆದರೆ, ಈಗ ಅನ್​ಲಾಕ್​ ಹಿನ್ನೆಲೆ ವಾರಾಂತ್ಯದಲ್ಲೂ ಅವಕಾಶ ಕಲ್ಪಿಸಲಾಗಿದ್ದು, ಶನಿವಾರ, ಭಾನುವಾರ ಸಹ ಇತರೆ ದಿನಗಳಂತೆಯೇ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಪ್ರಯಾಣಿಕರು ಮೆಟ್ರೋ ಅನುಕೂಲ ಪಡೆಯಬಹುದಾಗಿದೆ. ಜತೆಗೆ, ಜನದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್ ಹೇಳಿರುವುದರಿಂದ ಮೆಟ್ರೋ ಪಯಣವನ್ನೇ ನೆಚ್ಚಿಕೊಂಡವರು ನಿರಾಳರಾಗಿದ್ದಾರೆ.

ಈ ಹಿಂದೆ ಮೊದಲ ಹಂತದ ಅನ್​ಲಾಕ್​ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಆ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿತ್ತು. ಇದೀಗ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಅವಕಾಶ ನೀಡಲಾಗಿದೆ. ಜನದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದರಂತೆ ಸಂಚರಿಸಲಿರುವ ರೈಲು, ಉಳಿದ ಸಂದರ್ಭದಲ್ಲಿ 15 ನಿಮಿಷ ಅಂತರದಲ್ಲಿ ಓಡಾಡಲಿದೆ. ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ನಿಯಮಾವಳಿಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1ರಿಂದಲೇ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್​ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್​ಸಿಎಲ್​ (BMRCL) ಪ್ರಕಟಣೆಯಲ್ಲಿ ತಿಳಿಸಿತ್ತಾದ್ದರಿಂದ ಕಾರ್ಡ್​ ಇಲ್ಲದವರೂ ಟೋಕನ್​ ಪಡೆದು ಸಂಚರಿಸಬಹುದಾಗಿದೆ. ಈ ಹಿಂದೆ ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ಕಾರ್ಡ್​ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಾರ್ಡ್​ ಹೊಂದಿದವರು ಆನ್​ಲೈನ್​ ಮೂಲಕವೇ ರಿಚಾರ್ಜ್​ ಮಾಡಿಸಿಕೊಂಡು ಮೆಟ್ರೋದಲ್ಲಿ ಪಯಣಿಸಬಹುದು ಎನ್ನಲಾಗಿತ್ತು. ಟೋಕನ್​ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದ ಕಾರಣ ಕಾರ್ಡ್​ ಬಳಸದ ಅನೇಕ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಆದರೆ, ಜುಲೈ 1ರಿಂದ ಟೋಕನ್​ ಖರೀದಿಸಿ ಪ್ರಯಾಣ ಮಾಡಲು ಬಿಎಂಆರ್​ಸಿಎಲ್​ ಅವಕಾಶ ನೀಡಿದೆ.

ನೆನಪಿನಲ್ಲಿಡಬೇಕಾದ ಅಂಶಗಳು:
ಬೆಳಗ್ಗೆ 7 ರಿಂದ ರಾತ್ರಿ 8ರವರೆಗೆ ಮೆಟ್ರೋ ಸಂಚರಿಸಲಿದೆ
ವಾರಪೂರ್ತಿ ನಮ್ಮ ಮೆಟ್ರೋ ಸಂಚಾರ
ಕಾರ್ಡ್​ ಇಲ್ಲದವರು ಟೋಕನ್​ ಪಡೆದು ಪಯಣಿಸಬಹುದು
ಮಾಸ್ಕ್​ ಧರಿಸುವುದು ಕಡ್ಡಾಯ
ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದರೂ ಕೊರೊನಾ ನಿಯಮಾವಳಿ ಪಾಲಿಸುವುದು ಕಡ್ಡಾಯ
ಜನ ದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದು ರೈಲು, ಉಳಿದ ಸಮಯದಲ್ಲಿ 15 ನಿಮಿಷಕ್ಕೊಂದು ರೈಲು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *