Asaduddin Owaisi| ಹಸುವಿಗೂ ಎಮ್ಮೆಗೂ ವ್ಯತ್ಯಾಸ ತಿಳಿಯದವರೆಲ್ಲ ಗೋ ರಕ್ಷಕರು; ಮೋಹನ್ ಭಾಗವತ್‌ ಗೇಲಿ ಮಾಡಿದ ಓವೈಸಿ!

ಉತ್ತರಪ್ರದೇಶ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಮತ್ತು All India Majlis-e-Ittehadul Muslimeen ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವಿನ ಮಾತಿನ ಸಮರ ಇದೀಗ ತಾರಕಕ್ಕೆ ಏರಿದೆ. ಭಾನುವಾರ ಮುಸ್ಲಿಮ್ ರಾಷ್ಟ್ರೀಯ ಮಂಚ್ ಉತ್ತರಪ್ರದೇಶದ ಘಾಸಿಯಾಬಾದ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮೋಹನ್ ಭಾಗವತ್, “ಭಾರತದಲ್ಲಿ ಇಸ್ಲಾಮ್ ಧರ್ಮ ಅಪಾಯದಲ್ಲಿದೆ ಎಂದು ಸೃಷ್ಟಿಸಲಾದ ಭಯದ ಬಲೆಗೆ ಮುಸ್ಲಿಮರು ಸಿಲುಕಬಾರದು. ಎಲ್ಲಾ ಭಾರತೀಯರದ್ದೂ ಒಂದೇ ಡಿಎನ್​ಎ ಆಗಿದ್ದು, ಪೂಜಾಚರಣೆ ವಿಚಾರದಿಂದ ಜನರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ಹಾಗೆಯೇ, ಗೋ ರಕ್ಷಣೆ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ಸಹ ಸರಿಯಲ್ಲ. ಅಂಥವರು ಹಿಂದುತ್ವದ ವಿರುದ್ಧವಾಗಿದ್ದಾರೆ” ಎಂದು ಅಭಿಪ್ರಾಯಪ ಟ್ಟಿದ್ದರು. ಆದರೆ, ಭಾಗವತ್ ಅವರ ಈ ಮಾತಿಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಓವೈಸಿ, “ದೇಶದಲ್ಲಿ ಗೋವಿನ ಹೆಸರಲ್ಲೊ ಕೊಲೆ ಮಾಡುತ್ತಿರುವ ವರಿಗೆ ಹಿಂದುತ್ವದ ಸರ್ಕಾರವೇ ಬೆನ್ನೆಲುಬಾಗಿದೆ” ಎಂದು ಟೀಕಿಸಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಓವೈಸಿ, “ಆರ್‌ಎಸ್‌ಎಸ್‌ನ ಭಾಗವತ್ ಅವರು ಗುಂಪುಹತ್ಯೆ ಮಾಡಿದವರು ‘ಹಿಂದುತ್ವ ವಿರೋಧಿ’ ಎಂದು ಹೇಳಿದ್ದಾರೆ. ಆದರೆ, ಗೋ ರಕ್ಷಣೆಗೆ ಮುಂದಾಗುವ ಈ ಅಪರಾಧಿಗಳಿಗೆ ಹಸು ಮತ್ತು ಎಮ್ಮೆಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಆದರೆ, ಜುನೈದ್, ಅಖ್ಲಾಕ್, ಪೆಹ್ಲೂ, ರಕ್ಬರ್, ಅಲಿಮುದ್ದೀನ್ ಎಂಬ ಹೆಸರುಗಳ ಆಧಾರದ ಮೇಲೆ ಜನರನ್ನು ಕೊಲ್ಲವ ಬಗೆಯನ್ನು ಸಾಕಷ್ಟು ತಿಳಿದಿದ್ದಾರೆ. ಈ ಅಪರಾಧಿಗಳಿಗೆ ಹಿಂದುತ್ವ ಸರ್ಕಾರದ ಬೆಂಬಲವಿದೆ” ಎಂದು ಕಿಡಿಕಾರಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರ ಮೇಲೆ ಆಗುತ್ತಿರುವ ದಾಳಿಗಳನ್ನು ಉಲ್ಲೇಖಿಸಿರುವ ಅಸಾದುದ್ದೀನ್, 2015 ರಲ್ಲಿ ಮೊಹಮ್ಮದ್ ಅಖ್ಲಾಕ್ ಅವರ ಕ್ರೂರ ಹತ್ಯೆ, 2017 ರಲ್ಲಿ ಪೆಹ್ಲೂ ಖಾನ್ ಮೇಲೆ ನಡೆದ ದಾಳಿ ಮತ್ತು 2018 ರಲ್ಲಿ ಅಲಿಮುದ್ದೀನ್ ಸಾವುಗಳ ವಿರುದ್ಧ ದ್ವನಿ ಎತ್ತಿದ್ದಾರೆ.

“ಅಲಿಮುದ್ದೀನ್ ಕೊಲೆಗಾರರಿಗೆ ಕೇಂದ್ರ ಸಚಿವರ ಕೈಯಲ್ಲಿ ಹಾರ ಹಾಕಿಸಲಾಗುತ್ತದೆ. ಅಖ್ಲಾಕ್ ಕೊಲೆಗಾರನ ದೇಹದ ಮೇಲೆ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ. ಆಸಿಫ್ ಕೊಲೆಗಾರರಿಗೆ ಬೆಂಬಲವಾಗಿ ಮಹಾಪಂಚಾಯತ್ ಅನ್ನು ಕರೆಯಲಾಗುತ್ತದೆ” ಎಂದು ಟ್ವೀಟ್​ನಲ್ಲಿ ಒತ್ತಿ ಹೇಳಿದ್ದಾರೆ.

“ಹೇಡಿತನ, ಹಿಂಸೆ ಮತ್ತು ಕೊಲೆ ಗೋಡ್ಸೆಯ ಹಿಂದುತ್ವ ಚಿಂತನೆಯ ಅವಿಭಾಜ್ಯ ಅಂಗವಾಗಿದೆ. ಮುಸ್ಲಿಮರನ್ನು ಹತ್ಯೆ ಮಾಡುವುದು ಈ ಚಿಂತನೆಯ ಪರಿಣಾಮವಾಗಿದೆ” ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಓವೈಸಿ ಪಕ್ಷದ ಸ್ಪರ್ಧೆ ಮುಸ್ಲಿಂ ಸಮುದಾಯದ ಮತಗಳನ್ನು ಒಡೆಯಲಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್​, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳಿಗೆ ಅನಾನುಕೂಲವಾಗಲಿದೆ. ಆದರೆ, ಅತಿದೊಡ್ಡ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮತಗಳು ಒಡೆದು ಹೋಗುವುದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *