ಮಾಜಿ ಸಿಎಂ ಹೆಚ್ಡಿಕೆ ಮಾಧ್ಯಮ ಕಾರ್ಯದರ್ಶಿ ಕೆ.ಸಿ. ಸದಾನಂದ ನಿಧನ
ಬೆಂಗಳೂರು,ಜು.6- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ.ಸಿ.ಸದಾನಂದ(49) ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅಸ್ವಸ್ಥರಾಗಿದ್ದ ಸದಾನಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ತಂದೆ, ಪತ್ನಿ, ಪುತ್ರ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂತಹ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆ ಹೊಂದಿದ್ದರು. ಅವರ ಕುಟುಂಬದ ನೋವು ನನ್ನದೂ ಆಗಿದ್ದು, ಸದಾನಂದ ನಿರ್ಗಮಿಸಿದ್ದರೂ ಸದಾ ನೆನಪಿನಲ್ಲಿರುತ್ತೀರಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸಚಿವರಾದ ಕೆ.ಎಸ್.ಈಶ್ವರಪ್ಪ , ಬೆಂಗಳೂರು ವರದಿಗಾರರ ಕೂಟ, ಬೆಂಗಳೂರು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.