ಹೆಚ್’ಡಿಕೆ-ಸುಮಲತಾ ಸಂಘರ್ಷದ ನಡುವಲ್ಲೇ ಕೆಆರ್’ಎಸ್ ಅಣೆಕಟ್ಟು ಸುರಕ್ಷಿತವಾಗಿದೆ ಎಂದ ರಾಜ್ಯ ಸರ್ಕಾರ!

ಬೆಂಗಳೂರು; ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಮಾತಿನ ಸಮರ ಮುಂದುವರೆದಿದ್ದು, ಈ ನಡುವಲ್ಲೇ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.

ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್ಎನ್ಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಅವರು ಪ್ರತಿಕ್ರಿಯೆ ನೀಡಿ, ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ನಾಯಕರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ಅಣೆಕಟ್ಟು ಸುರಕ್ಷಾ ಪರಿಶೀಲನಾ ಸಮಿತಿ (ಡಿಎಸ್ಆರ್’ಪಿ) ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಅಣೆಕಟ್ಟೆಯನ್ನು ನಿಯಮಿತ ಅವಧಿಗಳಲ್ಲಿ ಪರಿವೀಕ್ಷಿಸಿ ವರದಿನಯನ್ನು ನೀಡುತ್ತಾ ಬಂದಿದ್ದಾರೆ. ಅಣೆಕಟ್ಟಿನ ಗೋಡೆಯಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಆಗಾಗ್ಗೆ ನಡೆಸಿದ ತಪಾಸಣೆಯಿಂದ ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಡಿಎಸ್ಆರ್’ಪಿ ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟಿನ ಬಲವನ್ನು ವೃದ್ಧಿಸಲು ಅವಕಾಶವಿರುವ ಕಾಮಗಾರಿಗಳನ್ನು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಹಂತ-1ರ ಅಡಿ ಕೈಗೊಳ್ಳಲಾಗಿದೆ. 70 ಅಡಿಯಿಂದ 131 ಅಡಿಯವರೆಗೆ ಹೊಸದಾಗಿ ಕಟ್ಟಡದ ಕಲ್ಲುಗಳ ಸಂದಿಯಲ್ಲಿ ದುರಸ್ತಿ ಮಾಡಿ ಅಣೆಕಟ್ಟೆಯನ್ನು ಭದ್ರಗೊಳಿಸಲಾಗಿದೆ. ಇದರಿಂದಾಗಿ ಅಣೆಕಟ್ಟೆಯಲ್ಲಿ ರಚನೆಯಲ್ಲಿ ಯಾವುದೇ ದೋಷ ಇರುವುದಿಲ್ಲ ಮತ್ತು ಬಿರುಕುಗಳು ಇಲ್ಲ ಎಂದು ವಿವರಿಸಿದ್ದಾರೆ.

ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ ವಿಶ್ವಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಜು.2ರಂದು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಸಲಹೆಗಾರರು ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಅಣೆಕಟ್ಟೆಯ 136 ಗೇಟುಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸಿದ್ದು, ಅಣೆಕಟ್ಟೆಯ ಗೋಡೆಯಲ್ಲಿ ಯಾವುದೇ ತರಹದ ಬಿರುಕು ಇಲ್ಲವೆಂದು ತಿಳಿಸಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *