Big News: ಸಾವಿರಾರು ರೌಡಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು; ನೂರಾರು ಜನ ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಗಿಳಿದ ಪೊಲೀಸರು ಬೆಳ್ಳಂಬೆಳಗ್ಗೆ ಸಾವಿರಾರು ರೌಡಿಶೀಟರ್​ಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನಗರದ 8 ವಲಯಗಳ ಪೊಲೀಸರಿಂದ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು, ಲಾಕ್​ಡೌನ್ ತೆರವು ಬಳಿಕ ಅಪರಾಧ ಕೃತ್ಯ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದಾರೆ. ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಸೇರಿದಂತೆ ಇತ್ಯಾದಿ ಕಾರಣಗಳಿಂದ ದಾಖಲಾಗಿದ್ದ ಕೊಲೆ ಪ್ರಕರಣಗಳು ಹಾಗೂ ಜೈಲಿನಲ್ಲೇ ಕುಳಿತು ರೌಡಿಸಂ ನಡೆಸುತ್ತಿದ್ದ ವಿಚಾರವನ್ನು ಅತಿ ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್, ಹೆಚ್ಚುವರಿ ಆಯುಕ್ತರು, ಡಿಸಿಪಿಗಳೊಂದಿಗೆ ಸಭೆ ನಡೆಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದರು. ಅದರಂತೆ ಆಯಾ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ನಿಗಾ ವಹಿಸಿದ್ದ ಪೊಲೀಸರು ಇಂದು ಬೆಳಗ್ಗೆ ಬೆಂಗಳೂರು ನಗರದಾದ್ಯಂತ ಸಾವಿರಕ್ಕೂ ಹೆಚ್ಚು ರೌಡಿ ಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಬಾಲ ಬಿಚ್ಚದಂತೆ ರೌಡಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ವಿಭಾಗದಲ್ಲೇ 70ಕ್ಕೂ ಅಧಿಕ ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿ ವೇಳೆ ಕೆಲ ಸ್ಥಳಗಳಲ್ಲಿ ಮಾರಕಾಸ್ತ್ರಗಳು, ಲಾಂಗ್ ಪತ್ತೆಯಾಗಿವೆ. ವಶಕ್ಕೆ ಪಡೆದ ಎಲ್ಲಾ ರೌಡಿಶೀಟರ್ಸ್​ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಮಾದಕ ವಸ್ತುಗಳ ಬಳಕೆ ಬಗ್ಗೆಯೂ ಪರೀಕ್ಷೆ ಮಾಡಲಾಗಿದೆ. ದಾಳಿ ಮಧ್ಯಾಹ್ನದ ತನಕವೂ ಮುಂದುವರೆಯುವ ಸಾಧ್ಯತೆ ಇದ್ದು, ಸಮಾಜಘಾತುಕ ಶಕ್ತಿಗಳಿಗೆ ಬಿಸಿ ಮುಟ್ಟಿಸಲು ಪೊಲೀಸರು ನಿರ್ಧರಿಸಿದ್ದಾರೆ.

BENGALURU POLICE RAID

ಸಮಾಜ ಘಾತುಕರಿಗೆ ಖಡಕ್​ ಎಚ್ಚರಿಕೆ

ಪಶ್ಚಿಮ ವಿಭಾಗದ 250 ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, ಉತ್ತರ ವಿಭಾಗದಲ್ಲಿ 292 ರೌಡಿ ಹಾಗೂ ಸಹಚರರ ಮನೆ ಮೇಲೆ ದಾಳಿ ನಡೆಸಿ 152 ಮಂದಿಯನ್ನು ಇಲ್ಲಿಯ ತನಕ ವಶಕ್ಕೆ ಪಡೆಯಲಾಗಿದೆ. ಈಶಾನ್ಯ ವಿಭಾಗದಲ್ಲೂ ಪೊಲೀಸರ ದಾಳಿ ಮುಂದುವರೆದಿದ್ದು, ಮುಬಾರಕ್, ಸಿಕಂದರ್, ಅಜಯ್ ಸೇರಿದಂತೆ ಹಲವು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಯಲಹಂಕ, ಕೊತ್ತನೂರು, ವಿದ್ಯಾರಣ್ಯಪುರ ಸೇರಿದಂತೆ ಹಲವು ಕಡೆ ದಾಳಿ ಮಾಡಿ ಪಾಯಿಸನ್ ರಾಮ, ಛತ್ರಿ ಹೇಮಂತ, ಕೆಂಡಾ ವಿಷ್ಣು, ಕೊಳಿ ಜಗ್ಗ, ಮಂಡ್ಯ ರಕ್ಷಿತಾ ಮನೆಗಳನ್ನು ಪರಿಶೀಲಿಸಿದ್ದಾರೆ.

ಡಿ.ಜೆ.ಹಳ್ಳಿ, ಬಾಗೂರ್ ಲೇಔಟ್, ಕೆ.ಜಿ ಹಳ್ಳಿ, ಇಸ್ಲಾಂಪುರಂ ಸೇರಿದಂತೆ ಬೆಂಗಳೂರು ಅನೇಕ ಕಡೆ ಪೊಲೀಸರು ದಾಳಿ ನಡೆಸಿದ್ದು, ಆಗ್ನೇಯ ವಿಭಾಗದ ಪೊಲೀಸರಿಂದ ಸುಮಾರು 200ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಬೇಗೂರಿನ ಜೆಸಿಬಿ ನಾರಾಯಣ, ಬಬ್ಲಿ, ಕುಮಾರ, ಸೋಲೊಮನ್, ಮಜೀದ್, ಕಬೂತರ್, ಇಮ್ರಾನ್, ಚೌದ್ರಿ ಸೇರಿದಂತೆ ವಿವಿಧ ರೌಡಿಗಳಿಗೆ ಪೊಲೀಸರು ಬಿಸಿ ತಾಕಿಸಿದ್ದಾರೆ. ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ, ವಿವೇಕನಗರ, ವೈಯಾಲಿಕಾವಲ್ ಸೇರಿದಂತೆ ವಿವಿಧ ವಿಭಾಗದಲ್ಲಿ ದಾಳಿ ಮಾಡಿದ ಪೊಲೀಸರು ಕೆಲ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೂರ್ವ ವಿಭಾಗದಲ್ಲಿ ವಶಕ್ಕೆ ಪಡೆದ ರೌಡಿಶೀಟರ್ಸ್​ಗೆ ಫ್ರೇಜರ್ ಟೌನ್​ನ ಸಂತೋಷ್ ಆಸ್ಪತ್ರೆಯಲ್ಲಿ‌ ತಪಾಸಣೆ ನಡೆಸಲಾಗಿದೆ.

ರೌಡಿ ಲಗ್ಗೆರೆ ಸೀನಾ, ಬಾಂಬ್ ನಾಗನ ಪುತ್ರ ಶಾಸ್ತ್ರಿ, ಸೈಲೆಂಟ್ ಸುನೀಲ, ಸೈಕಲ್ ರವಿ, ರಮೇಶ್ ಅಲಿಯಾಸ್ ಕುಳ್ಳಿ, ಆನಂದ, ಜಫ್ರು, ಯಶವಂತ, ಜಿಮ್ ವಿನಯ್, ರಘುನಂದನ ಅಲಿಯಾಸ್ ರಘು, ಅರುಣ್, ಶ್ರೀಕಾಂತ, ಆನಂದ ಅಲಿಯಾಸ್ ಮೆಡ್ಡ, ಪ್ರವೀಣ ಸೇರಿದಂತೆ ಅನೇಕ ರೌಡಿಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಕಾಗದಪತ್ರ, ಚೆಕ್ ಬುಕ್, ಮಾರಕಾಸ್ತ್ರ, ಮಾದಕವಸ್ತು ಮುಂತಾದವುಗಳಿಗಾಗಿ ಪರಿಶೀಲನೆ ನಡೆಸಿದ್ದಾರೆ.

ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆ
ಬೆಂಗಳೂರಿನ ವೈಟ್​ಫೀಲ್ಡ್ ವಿಭಾಗದಲ್ಲಿ 102 ಕಡೆ ಪರಿಶೀಲನೆ ನಡೆಸಿ 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕುಖ್ಯಾತ ರೌಡಿಶೀಟರ್​ಗಳಾದ ಕಾಡುಬೀಸನಹಳ್ಳಿ ಜಗ್ಗ, ಸೋಮ, ರೋಹಿತ್ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆಯಾಗಿದ್ದು ಅದನ್ನು ಜಪ್ತಿ ಮಾಡಲಾಗಿದೆ. ಯಲಹಂಕ ಪೊಲೀಸರ ದಾಳಿ ವೇಳೆ ಕೆಜಿ ಕೆಜಿ ಗಾಂಜಾ ಸಿಕ್ಕಿದ್ದು, ಲಾಲ ಎಂಬಾತನ ಮನೆಯಲ್ಲಿ ಐದು ಕೆಜಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಾಚರಣೆ ವೇಳೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ 12 ರೌಡಿಗಳನ್ನು ವಶಕ್ಕೆ ಪಡೆದು ಆಡುಗೋಡಿಗೆ ಕರೆದೊಯ್ಯಲಾಗಿದೆ. ವೃತ್ತ ನಿರೀಕ್ಷಕ ಸಂದೀಪ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ವೈಟ್​ಫೀಲ್ಡ್ ವಿಭಾಗದಲ್ಲಿ ಡಿಸಿಪಿ‌ ದೇವರಾಜ್ ನೇತೃತ್ವದಲ್ಲಿ, ಬಾಗಲಗುಂಟೆ ಬಳಿ ಸಿಪಿಐ ಸುನಿಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ವಿಚಾರಣೆ ನಡೆಸಿದ್ದಾರೆ. ಕೆಲವೆಡೆ ಶ್ವಾನದಳದ ಸಮೇತ ದಾಳಿ ನಡೆಸಿರುವ ಪೊಲೀಸರು ಅಕ್ರಮದಲ್ಲಿ ತೊಡಗಿಕೊಂಡಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರಿನ ಪೂರ್ವ ವಿಭಾಗದಲ್ಲಿ 188 ರೌಡಿಗಳನ್ನು, ಈಶಾನ್ಯ ವಿಭಾಗದಲ್ಲಿ 159 ರೌಡಿಗಳನ್ನು, ಪಶ್ಚಿಮ ಪೊಲೀಸರಿಂದ 76 ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರಗನ್ ಭೇಟಿ ನೀಡಿ ರೌಡಿಗಳಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಂಜಾ, ಮೊಬೈಲ್, ಸಿಮ್, ಚಾಕು ಪತ್ತೆ
ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಪೊಲೀಸರಿಂದ ದಾಳಿ ವೇಳೆ ಜೈಲಿನಲ್ಲಿ ಗಾಂಜಾ, ಮೊಬೈಲ್, ಸಿಮ್, ವಿವಿಧ ಮಾದರಿಯ ಚಾಕುಗಳು ಪತ್ತೆಯಾಗಿವೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಸಿಸಿಬಿ ಪೊಲೀಸರಿಂದ ದಾಳಿ ನಡೆದಿದ್ದು, ಇತ್ತೀಚೆಗೆ ನಡೆದ ಕೆಲ ಪ್ರಕರಣಗಳಿಗೆ ಜೈಲಿಂದ ಸ್ಕೆಚ್ ಹಾಕುತ್ತಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *