ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ! ಸುಮಲತಾ ಟ್ವೀಟ್‌ ಬಾಣ

ಹೈಲೈಟ್ಸ್‌:

  • ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ!
  • ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ
  • ದಳಪತಿಗಳ ವಿರುದ್ಧ ಪರೋಕ್ಷವಾಗಿ ಟ್ವೀಟ್‌ ಬಾಣ ಬಿಟ್ಟ ಸುಮಲತಾ ಅಂಬರೀಶ್

ಬೆಂಗಳೂರು: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವಿನ ತಿಕ್ಕಾಟ ಮುಂದುವರಿದಿದೆ. ಸದ್ಯಕ್ಕೆ ಈ ಗಣಿ, ಕೆಆರ್‌ಎಸ್‌ ಹೆಸರಿನಲ್ಲಿ ನಡೆದ ರಾಜಕೀಯ ತಿಕ್ಕಾಟಕ್ಕೆ ಕುಮಾರಸ್ವಾಮಿ ಕದನ ವಿರಾಮ ಘೋಷಣೆ ಮಾಡಿದರೆ ಸುಮಲತಾ ಅಂಬರೀಶ್ ಅವರು ಒಂದರ ನಂತರ ಒಂದರಂತೆ ಮಾತಿನ ಬಾಣಗಳನ್ನು ಬಿಡುತ್ತಿದ್ದಾರೆ.

ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ ಎಂದು ಎಚ್‌ಡಿ ಕುಮಾರಸ್ವಾಮಿ ಹಾಗೂ ದಳಪತಿಗಳಿಗೆ ಪರೋಕ್ಷವಾಗಿ ಸುಮಲತಾ ಅಂಬರೀಶ್ ತಿವಿದಿದ್ದಾರೆ. ಈ ಮೂಲಕ ಸುಮಲತಾ ಅಂಬರೀಶ್ ವಿರುದ್ಧ ವೈಯಕ್ತಿಕ ದಾಳಿಗಿಳಿದವರಿಗೆ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

ಮತ್ತೊಂದು ಕಡೆಯಲ್ಲಿ ಕುಮಾರಸ್ವಾಮಿ ಸದ್ಯ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಟ್ವೀಟ್‌ ಮೂಲಕ ಯಾವುದೇ ಹೇಳಿಕೆಗಳನ್ನು ನೀಡದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದು ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ಅವರು ಕೂಡಾ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ದಯವಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷದ ವರ್ಚಸ್ಸು, ಬೆಳವಣಿಗೆ ಹಾಗೂ ಭವಿಷ್ಯದ ಚುನಾವಣೆ , ಇವುಗಳನ್ನು ಮೊದಲ ಆದ್ಯತೆ ಎಂದು ಭಾವಿಸಿ ಈ ನಿಟ್ಟಿನಲ್ಲಿ ಚಿಂತಿಸಬೇಕು ಹಾಗು ಕಾರ್ಯಪ್ರವೃತ್ತರಾಗಬೇಕಿದೆ.

ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ,ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವಿನ ಈ ಯುದ್ಧ ಸದ್ಯಕ್ಕೆ ಮುಗಿದ ಹಾಗೆ ಕಾಣುತ್ತಿಲ್ಲ. ಎಚ್‌ಡಿಕೆ ಹೇಳಿಕೆಯಿಂದ ಶುರುವಾರ ಸಮರ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುವುದು ಸದ್ಯದ ಕುತೂಹಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *