ಸರ್ಕಾರಗಳ ಆದ್ಯತೆ ಜನಸಾಮಾನ್ಯರಲ್ಲ, ಬದಲಿಗೆ ಕಾರ್ಪೊರೇಟ್ ಮನೆತನಗಳ ಸೇವೆಗೈಯುವುದೇ ಅವರ ಆದ್ಯತೆ:ಡಾ.ಬರಗೂರು ರಾಮಚಂದ್ರಪ್ಪ
ಕಲಬುರಗಿ : “ದುಡಿಯುವ ಅರ್ಹತೆಯುಳ್ಳ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿ ಮಾಡಬೇಕಿರುವುದು ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ. ಆದರೆ ನಮ್ಮ ಸರ್ಕಾರಗಳ ಆದ್ಯತೆ ಜನಸಾಮಾನ್ಯರ ಏಳಿಗೆಯಾಗಿಲ್ಲ, ಬದಲಿಗೆ ಕಾರ್ಪೊರೇಟ್ ಮನೆತನಗಳ ಸೇವೆಗೈಯುವುದು ಅವರ ಆದ್ಯತೆಯಾಗಿದೆ” ಎಂದು ಇಂದು ಎಐಡಿವೈಒ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಿರುದ್ಯೋಗದ ವಿರುದ್ಧ ರಾಜ್ಯಮಟ್ಟದ ಆನ್ಲೈನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ನಾಡಿನ ಖ್ಯಾತ ಬರಹಗಾರರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು “ದೇಶದಲ್ಲಿ ಇಂದು 65 ಕೋಟಿ ಮಂದಿ ನಿರುದ್ಯೋಗಿಗಳಿದ್ದಾರೆ. ನ್ಯಾಷಿನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್ ಪ್ರಕಾರ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದಾಖಲಾಗಿದೆ. ಭಾರತವನ್ನು ವಿಶ್ವಗುರು ಮಾಡ್ತೀವಿ ಎಂದು ಭ್ರಮೆಯನ್ನು ಹಂಚಿದವರು ಇಂದು ಕೇವಲ ನಿರುದ್ಯೋಗವನ್ನು ನಿವಾರಿಸುವಲ್ಲಿ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 52ಲಕ್ಷ ಹುದ್ದೆಗಳನ್ನು ಭರ್ತಿಮಾಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಮಾಡುವುದಾಗಿ ಹೇಳಿದ್ದ ಸರ್ಕಾರವೇ ನೀಡಿರುವ ಅಂಕಿಅಂಶದ ಪ್ರಕಾರ 2015ರಲ್ಲಿ ಸರ್ಕಾರ ನೇಮಿಸಿದ ಹುದ್ದೆಗಳ ಸಂಖ್ಯೆ ಕೇವಲ 15,670 ಮಾತ್ರ! ಇತ್ತೀಚಿನ ವರ್ಷಗಳಲ್ಲಂತೂ ಯಾವುದೇ ನೇಮಕಾತಿಯೂ ನಡೆದಿಲ್ಲ.”
“ದೇಶದಲ್ಲಿ ಉದ್ಯೋಗಕ್ಕಾಗಿ ಹಾಹಾಕಾರವಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ 368 ಗ್ರೂಪ್.ಡಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದಾಗ ಸುಮಾರು 23ಲಕ್ಷ ಅರ್ಜಿಗಳು ಸಲ್ಲಿಕೆಯಾದವು. ಅದರಲ್ಲಿ 22ಲಕ್ಷ ಜನ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಪದವೀಧರರು ಮತ್ತು 265 ಜನರು ಡಾಕ್ಟರೇಟ್ ಪದವಿ ಪಡೆದ ಅರ್ಜಿದಾರರು ಇದ್ದರು. ಇದು ನಮ್ಮ ದೇಶದ ನಿರುದ್ಯೋಗದ ಭೀಕರತೆ. ಕೋವಿಡ್ 2ನೇ ಅಲೆಯ ನಂತರ ಸುಮಾರು 1.47 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜನರ ಆದಾಯ ಪ್ರಪಾತಕ್ಕೆ ಕುಸಿದಿದೆ. ಆದರೆ ಅಸ್ಸೊಚಾಮ್ ವರದಿಯ ಪ್ರಕಾರ ದೇಶದ 100 ಮಂದಿ ಬಿಲಿಯನೇರ್‍ಗಳ ಆದಾಯದಲ್ಲಿ 13ಲಕ್ಷ ಕೋಟಿ ರೂ.ಗಳ ಏರಿಕೆಯಾಗಿದೆ. ಸರ್ಕಾರದ ಜನವಿರೋಧಿ ಜಾಗತೀಕರಣ ನೀತಿಯ ಫಲ ಇದಾಗಿದೆ. ದೇಶದಲ್ಲಿ ಜಾಗತೀಕರಣದ ಕೂಸನ್ನು ಕಾಂಗ್ರೆಸ್ ಪೋಷಿಸಿತು. ಅದರ ಉನ್ಮತ್ತ ಯೌವನವನ್ನು ಈಗ ಬಿ.ಜೆ.ಪಿ ಸರ್ಕಾರ ಪೋಷಿಸುತ್ತಿದೆ. ಇದರ ಪರಿಣಾಮ ಇಂದು ದೇಶದ 74% ಸಂಪತ್ತನ್ನು ಕೇವಲ 1% ಬಂಡವಾಳಿಗರು ಅನುಭವಿಸುತ್ತಿದ್ದಾರೆ. ಉಳಿದ 99% ಜನ ಕೇವಲ 26% ಸಂಪತ್ತಿನಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಸಂಪತ್ತಿನ ಅಸಮಾನ ಹಂಚಿಕೆ ಸರಿಯಾಗಬೇಕು. ಉದ್ಯಮಿ ಕೇಂದ್ರಿತ ಉದ್ಯೋಗ ರಹಿತ ಅಭಿವೃದ್ಧಿಯ ಬದಲಿಗೆ ಜನಕೇಂದ್ರಿತ ಉದ್ಯೋಗ ಸೃಷ್ಟಿಗೆ ಪೂರಕವಾದ ಅಭಿವೃದ್ಧಿಗಾಗಿ ಆಗ್ರಹಿಸಿ ಬಲಿಷ್ಟ ಹೋರಾಟ ನಡೆಸಬೇಕು. ಅಂತಹ ಒಂದು ಹೋರಾಟವನ್ನು ರೂಪಸಿಲು ಎಐಡಿವೈಓ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ” ಎಂದರು.
ಸಮಾವೇಶದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿವೈಒ ಅಖಿಲ ಭಾರತ ಅಧ್ಯಕ್ಷರಾದ ಕಾ. ರಾಮಾಂಜನಪ್ಪ ಆಲ್ದಳ್ಳಿ ಅವರು “ನಿರುದ್ಯೋಗದ ವಿರುದ್ಧದ ಹೋರಾಟ ಅಲ್ಪಕಾಲೀನ ಹೋರಾಟವಲ್ಲ. ಅದು ಒಂದು ಸ್ಪಷ್ಟ ವೈಚಾರಿಕತೆಯ ಆಧಾರದ ಮೇಲೆ ನಡೆಸಬೇಕಾದ ಧೀರ್ಘಕಾಲೀನ ಹೋರಾಟವಾಗಿದೆ. ಸಮಸ್ಯೆಯ ಆಳವನ್ನು ಮತ್ತು ಮೂಲವನ್ನು ನಾವು ಸರಿಯಾಗಿ ಗ್ರಹಿಸಬೇಕು. ಯಾವುದೇ ಒಬ್ಬ ನಾಯಕನ ಪವಾಡದಿಂದ ನಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವುದೇ ಸರ್ಕಾರ ನಾವು ನಿರುದ್ಯೋಗವನ್ನು ನಿರ್ಮೂಲನೆ ಮಾಡುತ್ತೇವೆಂದು ಆಶ್ವಾಸನೆ ಕೊಟ್ಟ ಮಾತ್ರಕ್ಕೆ ನಾವು ಅವರನ್ನು ಬೆಂಬಲಿಸುವುದು ಸೂಕ್ತವಲ್ಲ. ವೈಜ್ಞಾನಿಕ ವಿಶ್ಲೇಷಣೆಯ ನಂತರ ನಾವು ಒಂದು ವಿಚಾರವನ್ನು ಅಂಗೀಕರಿಸಬೇಕು. ನಿರುದ್ಯೋಗದ ನಿರ್ಮೂಲನೆಗೆ ನಿಮ್ಮ ಕಾರ್ಯ ಯೋಜನೆ ಏನೆಂದು ನಾವು ಆಳ್ವಿಕರನ್ನು ಪ್ರಶ್ನಿಸಬೇಕು. ಸರ್ಕಾರಗಳು ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಕಡಿತಗೊಳಿಸುತ್ತಿವೆ. ಮೊದಲು ಈ ಪ್ರಕ್ರಿಯೆಯನ್ನು ನಿಲ್ಲಿಸಲು ಮತ್ತು ಹೊಸ ಉದ್ಯೋಗಗಳ ಸೃಷ್ಟಿಗಾಗಿ ನಾವು ಸರ್ಕಾರವನ್ನು ಒತ್ತಾಯಿಸಬೇಕು. ಬಜೆಟ್‍ನಲ್ಲಿ ಉದ್ಯೋಗ ಸೃಷ್ಟಿಗಾಗಿ ನಿರ್ದಿಷ್ಟ ಹಣವನ್ನು ಮೀಸಲಿಡಲು ಆಗ್ರಹಿಸಬೇಕು.” ಎಂದರು.
“ಆರ್ಥಿಕ ಹಿಂಜರಿತ ಮತ್ತು ಕೋವಿಡ್‍ನ ದಾಳಿಯಿಂದ ಜನಸಾಮಾನ್ಯರು ಜೀವನ ನಿರ್ವಹಣೆಗೆ ಪರಿತಪಿಸುತ್ತಿರುವಾಗ, ಜನರಿಗೆ ಸಂಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಇನ್ನೂ 2 ವರ್ಷಗಳ ಮುಂದೆ ತೆರವಾಗಲಿರುವ ಮುಖ್ಯಮಂತ್ರಿ ಗಾದಿಗೆ ಯಾರು ಏರಬೇಕೆಂದು ಈಗಲೇ ಹಾತೊರೆಯುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಇದರ ನಡುವೆ ಇಂದು ಸರ್ಕಾರ ನೀಡುತ್ತಿರುವ ಪುಡಿಗಾಸಿನ ಪರಿಹಾರ ಪ್ಯಾಕೇಜ್‍ಗಳಲ್ಲಿಯೂ 90%ರಷ್ಟು ಪಾಲು ಉಳ್ಳವರ ಪಾಲಾಗುತ್ತಿದೆ. ಆದರೆ ಜನಸಾಮಾನ್ಯರ ತೆರಿಗೆಯ ಹಣವನ್ನು ಖಾಸಗೀ ಮಾಲೀಕರಿಗೆ ಖರ್ಚು ಮಾಡಿತ್ತರುವ ಸರ್ಕಾರದ ನೀತಿಗಳನ್ನು ನಾವು ಸೋಲಿಸಬೇಕು. ಎಲ್ಲಾ ಕ್ಷೇತ್ರದಲ್ಲಿ ಗರಿಷ್ಠ ಉದ್ಯೋಗಗಳ ಸೃಷ್ಟಿಗಾಗಿ ನಾವು ಸರ್ಕಾರಗಳನ್ನು ಎಚ್ಚರಿಸುವಂಥ ಐಕ್ಯ ಹೋರಾಟಗಳನ್ನು ಕಟ್ಟಬೇಕು” ಎಂದು ಯುವಜನರಿಗೆ ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಎಐಡಿವೈಓ ರಾಜ್ಯ ಕಾರ್ಯದರ್ಶಿಗಳಾದ ಡಾ. ಜಿ.ಎಸ್. ಕುಮಾರ್ ಅವರು ‘ನಿರುದ್ಯೋಗವು ಯುವಜನರನ್ನು ಕಾಡುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಂಡಿದೆ. ಆದ್ದರಿಂದ ಇಂದು ದೇಶದೆಲ್ಲಡೆ ನಿರುದ್ಯೋಗದ ವಿರುದ್ಧ ಯುವಜನರ ಆಕ್ರೋಶ ಸಿಡಿದೇಳುತ್ತಿದೆ. ಅಂತಹ ಬಿಡಿಬಿಡಿಯಾದ ಹೋರಾಟದ ಧ್ವನಿಗಳನ್ನು ಒಂದು ಐಕ್ಯ ಹೋರಾಟವನ್ನಾಗಿ ಮಾರ್ಪಡಿಸಲು ಇಂದಿನ ಸಮಾವೇಶ ಭೂಮಿಕೆಯಾಗಲಿದೆ’ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಎಐಡಿವೈಓ ರಾಜ್ಯಾಧ್ಯಕ್ಷರಾದ ಕಾ. ಎಂ.ಉಮಾದೇವಿಯವರು ‘ಇಂದು ವಿವಿಧ ಕ್ಷೇತ್ರದಲ್ಲಿ ಅರ್ಹತೆ ಮತ್ತು ಕೌಶಲ್ಯಗಳಿಸಿರುವ ಕೋಟ್ಯಾಂತರ ಯುವಜನರು ನಿರುದ್ಯೋಗದಿಂದ ಬೇಸತ್ತು ಸರ್ಕಾರಗಳ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಅವಮಾನದಿಂದ ಎಷ್ಟೋ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭವಿಷ್ಯದ ಕುರಿತು ಭರವಸೆ ಕಳೆದುಕೊಂಡ ಉದ್ಯೋಗಾಕಾಂಕ್ಷಿಗಳನ್ನು ಒಗ್ಗೂಡಿಸಿ ಈ ಸಮಾವೇಶ ನಡೆಯುತ್ತಿದೆ. ಇಲ್ಲಿ ನಮ್ಮ ಹೋರಾಟದ ಹೆಜ್ಜೆಗಳನ್ನು ನಿರ್ಧರಿಸಿ, ಅದನ್ನು ಒಂದು ಗಮ್ಯಕ್ಕೆ ಕೊಂಡೊಯ್ಯಲು ನಾವು ಸನ್ನದ್ಧರಾಗೋಣ’ ಎಂದರು.
ಸುಮಾರು 800 ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮಾವೇಶದ ಕಾರ್ಯಕಲಾಪಗಳನ್ನು ಎಐಡಿವೈಓ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿದ್ಧಲಿಂಗ ಬಾಗೇವಾಡಿಯವರು ನಡೆಸಿಕೊಟ್ಟರು. ಸಮಾವೇಶದಲ್ಲಿ ನಿರುದ್ಯೋಗದ ವಿರುದ್ಧದ ಮುಖ್ಯಗೊತ್ತುವಳಿಯ ಜೊತೆಗೆ ಐದು ಉಪಗೊತ್ತುವಳಿಗಳನ್ನು ಮಂಡಿಸಿ, ಚರ್ಚಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಮಾವೇಶದ ಕೊನೆಯಲ್ಲಿ ರಾಜ್ಯಮಟ್ಟದ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಶರಣಪ್ಪ ಉದ್ಬಾಳ್, ಕಾರ್ಯದರ್ಶಿಯಾಗಿ ಸಿದ್ಧಲಿಂಗ ಬಾಗೇವಾಡಿ, ಉಪಾಧ್ಯಕ್ಷರುಗಳಾಗಿ ಚನ್ನಬಸವ ಜಾನೇಕಲ್, ವಿನಯ್‍ಸಾರಥಿ, ಸಂತೋಷ್ ಮತ್ತು ಲಕ್ಷ್ಮಣ್ ಪೀರಗಾರ್ ಆಯ್ಕೆಯಾದರು. ಸಮಿತಿಯ ಜಂಟಿ ಕಾರ್ಯದರ್ಶಿಗಳಾಗಿ ಜಗನ್ನಾಥ್ ಗುಲ್ಬರ್ಗ, ಭೀಮು ವಿಜಯಪುರ, ಭವಾನಿಶಂಕರ್ ಧಾರವಾಡ, ಕಛೇರಿ ಕಾರ್ಯದರ್ಶಿಯಾಗಿ ಜಯಣ್ಣ, ಖಜಾಂಚಿಯಾಗಿ ವಿಜಯಕುಮಾರ್ ಚಿತ್ರದುರ್ಗ ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ವಿವಿಧ ಕ್ಷೇತ್ರಕ್ಕೆ ಸೇರಿದ 19 ಜನರನ್ನು ಆಯ್ಕೆಮಾಡಲಾಯಿತು.