US COVID-19: ಅಮೆರಿಕಾದಲ್ಲಿ ಮತ್ತೆ ಕೊರೋನಾ ಸ್ಫೋಟ; 3 ವಾರಗಳಲ್ಲಿ ಕೇಸ್ ಡಬಲ್

ಅಮೆರಿಕಾದಲ್ಲಿ ಕೆಲ ತಿಂಗಳಿನಿಂದ ಕಡಿಮೆಯಾಗಿದ್ದ ಕೊರೋನಾ ಆರ್ಭಟ ಈಗ ಮತ್ತೆ ಹೆಚ್ಚಾಗಿದೆ. ಕಳೆದ ಮೂರು ವಾರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಡೆಲ್ಟಾ ರೂಪಾಂತರಿ ವೈರಸ್​ ಅತೀ ವೇಗವಾಗಿ ದೇಶಾದ್ಯಂತ ಹರಡುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.

ಸೋಮವಾರ ಒಂದೇ ದಿನ ಅಮೆರಿಕಾದಲ್ಲಿ 23,600 ಕೊರೋನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಜೂನ್​ 23ರಂದು 11,300 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಈಗ ಕೊರೋನಾ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಜಾನ್ಸ್​ ಹಾಪ್ಕಿನ್ಸ್​ ಯೂನಿವರ್ಸಿಟಿ ಮಾಹಿತಿ ನೀಡಿದೆ.

ಅಮೆರಿಕಾದಲ್ಲಿ ಮೈನ್​ ಮತ್ತು ಸೌತ್​ ಡಕೋಟ ಎಂಬ ಎರಡು ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ ಕಳೆದ 2 ವಾರಗಳಿಂದ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಜುಲೈ 4ನೇ ವಾರದ ನಂತರ ಇನ್ನೂ ಹೆಚ್ಚಿನ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದು ಕಾಕತಾಳೀಯವಲ್ಲ ಎಂದು ಸೇಂಟ್​ ಲೂಯಿಸ್​ನಲ್ಲಿರುವ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್​ ಆಫ್ ಮೆಡಿಸಿನ್​​ನ ಸಾಂಕ್ರಾಮಿಕ ರೋಗ ವಿಭಾಗದ ಸಹ ನಿರ್ದೇಶಕ ಡಾ.ಬಿಲ್​ ಪೌಡರ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಲು ಅಮೆರಿಕಾದ ಅನೇಕ ಕಡೆ ಜನರಿಗೆ ತ್ವರಿತವಾಗಿ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ರೂಪಾಂತರಿ​ ಕೊರೋನಾ ವೈರಸ್​ ಈಗ ಎಲ್ಲೆಡೆ ಅತೀ ವೇಗವಾಗಿ ಹರಡುತ್ತಿದೆ.

ಅಮೆರಿಕಾದಲ್ಲಿ ಈವರೆಗೆ 55.6 ಜನರು ಕೋವಿಡ್​-19ನ ಮೊದಲ ಲಸಿಕೆ ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.ಒಟ್ಟು 5 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಕಳೆದ 2 ವಾರಗಳಲ್ಲಿ ದ್ವಿಗುಣಗೊಂಡಿವೆ. ಜೊತೆಗೆ ಈ ರಾಜ್ಯಗಳಲ್ಲಿ ವ್ಯಾಕ್ಸಿನೇಶನ್ ದರ ಕಡಿಮೆ ಇದೆ. ಮಿಸೌರಿಯಲ್ಲಿ ಶೇ. 45.9, ಅರ್ಕಾನ್ಸಾಸ್​ನಲ್ಲಿ ಶೇ.43, ನೆವಾಡಾದಲ್ಲಿ ಶೇ.50.9, ಲೂಯಿಸಿಯಾನದಲ್ಲಿ ಸೇ.39.2 ಮತ್ತು ಉತಾಹ್​​​ನಲ್ಲಿ ಶೇ.49.5 ಲಸಿಕೆ ದರ ಇದ್ದು, ಈ ರಾಜ್ಯಗಳು ಅತೀ ಕಡಿಮೆ ವ್ಯಾಕ್ಸಿನೇಷನ್ ರೇಟ್ಸ್ ಹೊಂದಿವೆ ಎಂದು ತಿಳಿದು ಬಂದಿದೆ.

ದಿನೇ ದಿನೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಲಾಸ್​ ಏಂಜಲೀಸ್ ಕೌಂಟಿ ಮತ್ತು ಸೇಂಟ್​ ಲೂಯಿಸ್​ನಂತಹ ಸ್ಥಳಗಳಲ್ಲಿ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಹಾಕಿಕೊಳ್ಳಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.

ಮಿಸೌರಿ ಮತ್ತು ಆರ್ಕಾನ್ಸಾಸ್​​ನಿಂದ ಚಿಕಾಗೋಗೆ ಬರುವ ಪ್ರಯಾಣಿಕರು ಲಸಿಕೆ ಹಾಕಿಸಿಕೊಂಡಿರದಿದ್ದರೆ, ಅವರನ್ನು 10 ದಿನ ಕ್ವಾರಂಟೈನ್​​ಲ್ಲಿ ಇರಿಸಲಾಗುತ್ತದೆ. ಇಲ್ಲವೇ ಅವರು ಕೋವಿಡ್​-19 ನೆಗೆಟಿವ್ ವರದಿ ತೋರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *