Tokyo Olympics ನಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನ ಗೆದ್ದರೆ 5 ಕೋಟಿ ಬಹುಮಾನ: ಸಿಎಂ ಬಿಎಸ್‌ವೈ ಘೋಷಣೆ
ಹೈಲೈಟ್ಸ್:
- ರಾಜ್ಯದ ಕ್ರೀಡಾಪಟುಗಳು ಚಿನ್ನ ಗೆದ್ದರೆ 5 ಕೋಟಿ ಬಹುಮಾನ
- ಸಿಎಂ ಬಿಎಸ್ ಯಡಿಯೂರಪ್ಪ ಅಧಿಕೃತ ಘೋಷಣೆ
- ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು
ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುವಿಗೆ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬುಧವಾರ ಘೋಷಿಸಿದ್ದಾರೆ. ಜತೆಗೆ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಅನುಕ್ರಮವಾಗಿ 3 ಹಾಗೂ 2 ಕೋಟಿ ರೂಪಾಯಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಮೂವರು ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವತಿಯಿಂದ ತಲಾ ಹತ್ತು ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಿ ಅವರು ಈ ಘೋಷಣೆ ಮಾಡಿದರು.
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಶ್ರೀಹರಿ ನಟರಾಜ್ ಮತ್ತು ಅವರ ತರಬೇತುದಾರರನ್ನು ಸನ್ಮಾನಿಸಿದ ಮುಖ್ಯಮಂತ್ರಿ, ಚೆಕ್ ಹಸ್ತಾಂತರಿಸಿದರು. ಇವರಲ್ಲದೆ, ಈಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ ಹಾಗೂ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರಿಗೆ ಚೆಕ್ ನೀಡಿದರು.
ಕ್ರೀಡಾ ಸಚಿವ ಡಾ. ನಾರಾಯಣಗೌಡ, ”ಒಲಿಂಪಿಕ್ಸ್ ಈಜು ಸ್ಪರ್ಧೆಗೆ ಇದೇ ಮೊದಲ ಬಾರಿ ಅರ್ಹತೆ ಪಡೆದಿರುವ ಶ್ರೀಹರಿ ನಟರಾಜ್ ಕನ್ನಡಿಗರ ಹೆಮ್ಮೆಯ ವಿಚಾರ,” ಎಂದು ಹೇಳಿದ ಅವರು, ಅದಿತಿ ಹಾಗೂ ಫವಾದ್‌ಗೂ ಶುಭಾಶಯ ತಿಳಿಸಿದರು. ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.